ಈ ಪುಟವನ್ನು ಪ್ರಕಟಿಸಲಾಗಿದೆ
53

ಬಸವಣ್ಣನವರಿಗೆ ಇದನ್ನರಹುವವರಾರು? ಇದನ್ನವರು ಒಪ್ಪಿಕೊಳ್ಳಬಹುದೇ? ಆಗ ರಾಯನಿಗೆ ಬಸವಣ್ಣನವರ ಪರಮ ಸ್ನೇಹಿತರಾದ ಬಾಚರಸ ಹಾಗೂ ಅವರ ಭಾವಂದಿರಾದ ಶಿವದೇವರ ನೆನಪಾಯಿತು. ಬಸವಣ್ಣನವರು ಪ್ರಧಾನ ಮಂತ್ರಿಗಳಾದಾಗಿನಿಂದ ಬಾಚರಸನು ಭಾಂಡಾರಗೃಹದಲ್ಲಿ ಕರಣಿಕನಾಗಿಯೂ ಶಿವದೇವನು ಅರಮನೆಯ ಮಕ್ಕಳ ಉಪಾಧ್ಯಾಯನಾಗಿಯೂ ಕೆಲಸ ಮಾಡುತ್ತಿದ್ದರು. ಆದುದರಿಂದ ಬಿಜ್ಜಳರಾಯನಿಗೆ ಅವರ ಪರಿಚಯವಿದ್ದಿತು. ಅವರೀರ್ವರ ಮುಖಾಂತರ ಆತನು ತನ್ನ ಮನೀಷೆಯನ್ನು ಬಸವಣ್ಣನವರಿಗೆ ತಿಳಿಸಿದನು. ಅದಕ್ಕೆ ಬಸವಣ್ಣನವರು ಎಂದಿನಂತೆ, "ಗುರುಹಿರಿಯರನ್ನು ಕೇಳೋಣ. ಅವರ ಆಜ್ಞೆಯಂತೆಯೇ ಮಾಡೋಣ ಎಂಬುದಾಗಿ ತಮ್ಮ ಅಭಿಮತವನ್ನು ರಾಯನಿಗೆ ಅರುಹಿದರು.
ಕೂಡಲೇ ಬಿಜ್ಜಳರಾಯನು ತನ್ನ ಬಿನ್ನಹವನ್ನು ಒಳಗೊಂಡ ಕಾಗದ ಒಂದನ್ನು ಸೇವಕನ ಕೂಡ ಸಂಗಮಕ್ಷೇತ್ರದಲ್ಲಿಯ ಶ್ರೀ ಈಶಾನ್ಯಮುನಿಗಳೆಡೆ ಕಳುಹಿದನು. ಅದನ್ನೋದಿ, ಇನ್ನು ಅರಮನೆಯೇ ಗುರುಮನೆಗೆ ಬರುವದರಿಂದ ಬಸವಣ್ಣನ ಭಾಗ್ಯರವಿಯು ನಡುಮುಗಿಲನ್ನು ಮುಟ್ಟುವನು, ಎಂದೆನಿಸಿ ಮುನಿಗಳು ಪುಲಕಿತರಾದರು. ಆದುದರಿಂದ ಇದು ದ್ವಿತೀಯ ಸಂಬಂಧವಿದ್ದರೂ ವರು ಅದಕ್ಕೊಪ್ಪಿ ರಾಯನ ಕಾಗದಕ್ಕೆ ಉತ್ತರವನ್ನು ಕಳುಹಿಸಿ ಕೊಟ್ಟರು:
“ತಾವು ತಮ್ಮ ತಂಗಿಗೆ ಶಿವದೀಕ್ಷೆಯನ್ನು ಕೊಡಿಸಲು ಸಿದ್ಧರಿದ್ದರೆ, ಬಸವಣ್ಣನವರು ಮದುವೆಗೆ ಒಪ್ಪಿಕೊಳ್ಳಬಹುದು. ನಾವು ಅವರಿಗೆ ಆ ಬಗೆಯಾಗಿ ತಿಳಿಸುವೆವು.
೨೨. ಬಿಜ್ಜಳನು ಶೈವನಿದ್ದನು ಎಂಬುದು ಕೆಲ ಸಂಶೋಧಕರ ಮತ. ಹಾಗಿದ್ದ ಪಕ್ಷದಲ್ಲಿ ದೀಕ್ಷೆ'ಯು ಅಪ್ರಸ್ತುತವಾಗುವದು.