ಈ ಪುಟವನ್ನು ಪ್ರಕಟಿಸಲಾಗಿದೆ

74
ಪ್ರಭುದೇವರು, ಬಸವಣ್ಣನವರು, ಸಿದ್ಧರಾಮರು, ಅಕ್ಕಮಹಾದೇವಿಯವರು ಮತ್ತು ಚೆನ್ನಬಸವಣ್ಣನವರು - ಈ ಶರಣಪಂಚಕವು 'ಅನುಭವ ಮಂಟಪ' ದ ಪಂಚಪ್ರಾಣಗಳು. ಪ್ರಭುದೇವರ ಜ್ಞಾನ, ಬಸವಣ್ಣನವರ ಭಕ್ತಿ ಸಿದ್ಧರಾಮರ (ಕರ್ಮ) ಯೋಗ, ಅಕ್ಕನವರ ವಿರತಿ, ಚೆನ್ನನ ಚೈತನ್ಯ-ಕ್ರಿಯಾಶಕ್ತಿ ಸಂಘಟನಾಕೌಶಲ ಇವು ಒಂದುಗೂಡಿ 'ಅನುಭವಮಂಟಪ' ದಲ್ಲಿ ಹೊಸ ಚೈತನ್ಯವನ್ನು ತುಂಬಿದವು. ಅದೊಂದು ಚೈತನ್ಯದ ವಿದ್ಯುದಾಗರ ಆಯಿತು. ಶರಣರನೇಕರಿಗೆ ಅದು ಚೈತನ್ಯವನ್ನೂ ಬೆಳಕನ್ನೂ ನೀಡಿತು. ಅವರಿಂದ ಜನಜಾಗೃತಿಯ ಅದ್ಭುತ ಕಾರ್ಯವನ್ನು ನೆರವೇರಿಸಿತು.
ಪ್ರಭುದೇವರು ಅದರಲ್ಲಿಯ ಶೂನ್ಯಸಿಂಹಾಸನವನ್ನು ಅಲಂಕರಿಸಿ, ಅದರ ಸಭಾಪತಿಗಳ ಕಾರ್ಯವನ್ನು ನಿರ್ವಹಿಸಿದರು. ಅಲ್ಲಿ ನಡೆವ ಗೋಷ್ಠಿಯಲ್ಲಿ ಬಗೆಬಗೆಯ ಧಾರ್ಮಿಕ, ನೈತಿಕ, ಸಾಮಾಜಿಕ ವಿಷಯಗಳ ಮೇಲೆ ಬಿಚ್ಚು ಮನಸ್ಸಿನಿಂದ ಚರ್ಚೆಯು ನಡೆಯುತ್ತಿತ್ತು. ಆಗ ಅನೇಕರಲ್ಲಿಯ ಅಮೂರ್ತ ವಿಚಾರಗಳು ಮೂರ್ತಸ್ವರೂಪವನ್ನು ತಳೆಯುತ್ತಿದ್ದವು. ಅವುಗಳಲ್ಲಿ ಪ್ರಭುದೇವರ ಒಪ್ಪಿಗೆಯನ್ನು ಪಡೆದವುಗಳನ್ನು ಚೆನ್ನಬಸವಾದಿ ಕಾರ್ಯಕುಶಲ ಶರಣರು ಬೇರ ಶರಣರಿಗೆ ತಿಳಿಸಿಹೇಳಿ, ಅವನ್ನು ಕಾರ್ಯರಂಗಕ್ಕಿಳಿಸುತ್ತಿದ್ದರು. ಅವನ್ನು ಜನಜೀವನದಲ್ಲಿ ಹರಿಬಿಡುತ್ತಿದ್ದರು. ಈ ನವ ವಿಚಾರಗಳನ್ನು ಪ್ರಸಾರ ಮಾಡಲು, ಅವರು ಜಂಗಮರಿಗೆ ಮೊದಲು ತರಬೇತಿಯನ್ನು ಕೊಡುತ್ತಿದ್ದರು. ಅವರಿಗೆ ವೀರಶೈವ ಮತದ ವಿಶೇಷ ಕುರುಹುಗಳಾದ ಷಟ್‌ಸ್ಥಲ, ಅಷ್ಟಾವರಣ, ಪಂಚಾಚಾರ ಇವುಗಳ ರಹಸ್ಯವನ್ನು ಅರುಹುತ್ತಿದ್ದರು. ಜನರೊಡನೆ ಜಂಗಮರು ಹೇಗೆ ನುಡಿಯಬೇಕು, ಎಂಬುದನ್ನು ಅವರಿಗೆ ಕಲಿಸುತ್ತಿದ್ದರು. ಕೆಳಗೆ ಕಾಣಿಸಿದ ಒಂದೆರಡು ಉದಾಹರಣೆಗಳಿಂದ ಅವರು ನೀಡುತ್ತಿರುವ ಶಿಕ್ಷಣದ ರೀತಿಯು ಗೊತ್ತಾಗಬಹುದು.
ಜನತೆಯಲ್ಲಿ ಜಂಗಮರು ಹೇಗೆ ವರ್ತಿಸಬೇಕು ಎಂಬುದನ್ನು ಈ ರೀತಿ ಪ್ರಭುದೇವರು ಅರುಹಿರುವರು :