ಈ ಪುಟವನ್ನು ಪ್ರಕಟಿಸಲಾಗಿದೆ
ಸಂತಾಪಕ.

ಈ ಶಾರಿಕಾಶುಕವಿಹಾರವನ್ನು ನೋಡುತ್ತೆ ಕುಳಿತಿದ್ದ ಯುವತಿಯು
ನಿಟ್ಟುಸಿರನ್ನು ಬಿಟ್ಟು ತಿರುಗಿನೋಡಿದಳು. ಆಗ ಅವಳ ಹಿಂದೆ ಕಿಶೋರ
ವಯಸ್ಕಳಾದ ಒಬ್ಬ ಸುಂದರಿಯು ನಿಂತಿದ್ದಳು. ಅವಳ ಕೈಯಲ್ಲಿ ಒಂದು
ಪತ್ರಿಕೆಯಿದ್ದಿತು. ಪತ್ರಿಕೆಯನ್ನು ಹಿಡಿದುಕೊಂಡಿದ್ದವಳು " ಕಮಲ
ಕುಮಾರಿ ! ನೀನು ನೋಡುತಿದ್ದುದೇನು ? " ಎಂದು ನಗುತ್ತೆ ಪ್ರಶ್ನೆಮಾಡಿ
ದಳು. ಯುವತಿಯ ಹೆಸರು ಕಮಲಕುಮಾರಿ. ಕಮಲಕುಮಾರಿಯು
ಕಮಲಾಕರದತ್ತನ ಮಗಳು. ಅವಳು ಈ ಪ್ರಶ್ನೆಯನ್ನು ಕೇಳಿ ಸಂಕುಚಿತ
ಮಾನಸೆಯಾಗಿ,__
" ನಾನೇನೂ ಕಾಣೆ. ಪಾಟಲಿಕೇ ! ನೀನಿಲ್ಲಿಗೆ ಯಾವಾಗಬಂದೆ ? "
ಎಂದಳು. ಪತ್ರಿಕೆಯನ್ನು ಹಿಡಿದುಕೊಂಡಿದ್ದವಳ ಹೆಸರು ಪಾಟಲಿಕೆ.
ಇವಳು ಕಮಲಕುಮಾರಿಗೆ ಬಾಲ್ಯಸ್ನೇಹಿತಳು. ಕುಮಾರಿಯು ಶಾರಿಕಾ
ಶುಕವಿಹಾರವನ್ನು ನೋಡುತ್ತೆ ಅನ್ಯಾಸಕ್ತಮಾನಸೆಯಾಗಿದ್ದಾಗ ಇವಳು
ಬಂದಳು, ಪಾಟಲಿಕೆಯು ಕಮಲಕುಮಾರಿಯ ಚಿತ್ತವೃತ್ತಿಯನ್ನು
ಚೆನ್ನಾಗಿ ಅರಿತವಳಾಗಿದ್ದುದರಿಂದ ಹುಸಿನಗೆಗೂಡಿ,__
" ಕುಮಾರಿ ! ಒಂದಾನೊಂದುದಿನ ನೀನೂ ನಿನ್ನ ರಮಣನೊಡನೆ
ಹೀಗೆಯೇ ವಿಹರಿಸುವೆ. ಇದಕ್ಕೆ ಚಿಂತೆಯೇಕೆ ? ",
ಎಂದು ನುಡಿದಳು. ಕಮಲಕುಮಾರಿಯು ಅಪ್ರತಿಭಳಾಗಿ,
" ಪಾಟಲಿ ! ನಿನ್ನ ಕೈಯಲ್ಲಿರುವುದೇನು ? "
ಪಾಟಲಿಕೆ :- ಕುಮಾರಿ ! ವಿಜಯವರ್ಮನು ನಿನಗೆ ಈ ಪತ್ರಿಕೆ
ಯನ್ನು ಕಳುಹಿಸಿರುವನು,
ಎಂದು ಕೊಟ್ಟಳು. ಕವಲಕುಮಾರಿಯು ಅದನ್ನು ಕೈಗೆ ತೆಗೆದು
ಕೊಂಡು ಸ್ವಲ್ಪ ಹೊತ್ತು ಏನೋ ಆಲೋಚಿಸುತ್ತಿದ್ದಳು. ಬಳಿಕ ಅದನ್ನು
ಓದಿನೋಡದೆ ಸಹಸ್ರಶಃ ಹರಿದುಹಾಕಿ ತಟ್ಟನೆದ್ದು ಮನೆಗೆಹೋದಳು.
ಪಾಟಲಿಕೆಯೂ ಅವಳ ಹಿಂದೆ ಹೊರಟುಹೋದಳು.



*