ಈ ಪುಟವನ್ನು ಪ್ರಕಟಿಸಲಾಗಿದೆ
೩೮
ಸತೀಹಿತೈಷಿಣಿ

ವಿನೋದನು ಕ್ಲೇಶರೋಷಗಳಿಂದ ಮಯ್ಯರೆತು. - 'ಅಮ್ಮ ಸಾಕು! ಸಾಕು!! ನಿಮಗೂ, ನಿನ್ನ ಮಾತುಗಳಿಗೂ, ನಿಮ್ಮ ಮನೆಗೂ, ಇದೊ ಇದೊ ಅನೇಕಾನೇಕ ವಂದನೆಗಳು!!!' ಎಂದು ಕೈಮುಗಿದು, ಅಲ್ಲಿ ನಿಲ್ಲದೆ ಹೊರಟುಹೋದನು.

ಸಿದ್ಧಾನ್ತಿ - ಖಿನ್ನಮನಸ್ಕನಾಗಿ ಸುಮ್ಮನೆ ಕುಳಿತುಬಿಟ್ಟನು.

ಗಿರಿಯಮ್ಮನು ಸಂತೋಷಾತಿಶಯದಿಂದ ಸಭಾಂಗಣಕ್ಕೆ ಹೋಗಿ ತನ್ನ ಪ್ರಭಾವವನ್ನು ಪ್ರಕಾಶಪಡಿಸಿಕೊಂಡು ಅಂದಿನ ಸಭೆಯನ್ನು ವಿಸರ್ಜಿಸಿದಳು.

ಸುಹೃದಯ ಸೋದರಿಯರೇ |

ನೀವೂ ಇಂತಹ ಸಭೆಗೆ ಸಂಬಂಧಿಸಿದವರೇ ಆಗಿದ್ದರೆ, ನಮ್ಮ ಮೇಲೆ ನಿಮಗೆ ಅತ್ಯಾಗ್ರಹವಿರಬಹುದು! ಆದರೆ ನಾವೇನು ಮಾಡುವ? ಒಂದು ಸಂಸಾರ ಚಿತ್ರದ ಸ್ವರೂಪವನ್ನು ಯಥಾವತ್ತಾಗಿ ನಿಮ್ಮ ಮುಂದಿಟ್ಟಿರುವೆವಲ್ಲದೆ ಬೇರಿಲ್ಲ. ಆದರೂ, ಪ್ರಕೃತಿಯು ಒಬ್ಬೊಬ್ಬನಿಗೆ ಒಂದೊಂದು ಬಗೆಯಾಗಿ ಕಾಣುವಂತೆ ಇದೂ ಕಾಣುತ್ತಿರಬಹುದು. ಸಂಸಾರಸಾಗraದಲ್ಲಿ ಮುಳುಗಿ ತೇಲುತ್ತಿರುವ ಮಹಾಶಯರಿಗೆ ಇದು ಸುಳ್ಳಾಗಿ ತೋರಲಾರದು. ಹಾಗಾದರೆ ನಿಮ್ಮಲ್ಲಿ ಇಂತಹ ಸಭಾಸದರಾಗಿರುವವರಿದ್ದರೂ - ಅವಳು ಇಂದೇ ದೃಢಸಂಕಲ್ಪದಿಂದ ಅನಂಗೀಕಾರ ಪತ್ರವನ್ನು ಬರೆದು ಕಳಿಸಿಬಿಡಬೇಕೆಂಬುದೇ ನಮ್ಮ ಪ್ರಾರ್ಥನೆ.