ಈ ಪುಟವನ್ನು ಪ್ರಕಟಿಸಲಾಗಿದೆ

-೬೭-

ಹನೆಯಲ್ಲಿ ಚಲನೆ, ಗಾಳಿಗಳು.

ಹವೆಯಲ್ಲಿ ಚಲನೆಯುಂಟಾದಾಗ ಮಾತ್ರ ಹವೆಯು ನಮ್ಮ ಸುತ್ತಲು ವ್ಯಾಪಿಸಿರುವದೆಂದು ತಿಳಿಯಬರುತ್ತದೆಂತಲೂ, ಚಲನೆಯಲ್ಲಿರುವ ಹವೆಯನ್ನೇ ನಾವು ಗಾಳಿಯೆಂದು ಕರೆಯುತ್ತೇವೆಂತಲೂ ಏಳನೇ ಅಧ್ಯಾಯದಲ್ಲಿ ತಿಳಿಸಿರುತ್ತದೆ. ಗಾಳಿಯು ಬೇರೆ ಬೇರೆ ಕಾಲಗಳಲ್ಲಿ ಬೇರೆ ಬೇರೆ ದಿಕ್ಕುಗಳಿಂದ ಬೀಸುತ್ತದೆಂದು ಹೇಳಲ್ಪಟ್ಟಿರುತ್ತದೆ. ಈಗ ಇವುಗಳಿಗೆ ಕಾರಣಗಳನ್ನು ವಿಚಾರ ಮಾಡೋಣ.

ಸಮಮಟ್ಟವನ್ನು(ಪಾತಳಿಯನ್ನು) ಕಾದುಕೊಳ್ಳುವುದು ನೀರಿನ ಒಂದು ಮುಖ್ಯ ಗುಣವಷ್ಟೇ. ಆದ್ದರಿಂದ ಒಂದು ಕೆರೆಯಲ್ಲಾಗಲಿ ಪಾತ್ರೆಯಲ್ಲಾಗಲಿ ಒಂದು ಮೂಲೆಯಲ್ಲಿ ಬೀಳುವ ನೀರು ಅಲ್ಲೇ ರಾಶಿಯಾಗದೆ ಎಲ್ಲಾ ಕಡೆಗಳಿಗೆ ಹರಿದು ಒಂದೇ ಮಟ್ಟದಲ್ಲಿ ನಿಲ್ಲುತ್ತದೆ. ಇದೇ ರೀತಿಯಲ್ಲಿ ಹವೆಯು ಎಲ್ಲಾ ಕಡೆಗಳಲ್ಲಿ ಸಮಭಾರವನ್ನು ಕಾದುಕೊಳ್ಳುವ ಗುಣವನ್ನು ಹೊಂದಿರುತ್ತದೆ. ಈ ಲಕ್ಷಣದಿಂದ ನೀರು ಎತ್ತರವಾದ ಪ್ರದೇಶದಿಂದ ತಗ್ಗಾದ ಸ್ಥಳಗಳ ಕಡೆಗೆ ಹರಿಯುವಂತೆ, ಹವೆಯು ಹೆಚ್ಚು ಒತ್ತುವಿಕೆಯಿರುವ ಸ್ಥಳದಿಂದ ಕಡಿಮೆ ಒತ್ತುವಿಕೆಯಿರುವ ಸ್ಥಳದ ಕಡೆಗೆ ಬೀಸುತ್ತದೆ. ಆದ್ದರಿಂದ ಯಾವದಾದರೂ ಒಂದು ಸ್ಥಳದಲ್ಲಿ ಹವೆಯು ವಿರಳವಾದರೆ, ಸುತ್ತುಮುತ್ತಲಿನ ಸ್ಥಳಗಳಿಂದ ಹವೆಯು ಅಲ್ಲಿ ವೇಗವಾಗಿ ಬಂದು ಸೇರುವದು.

ಹವೆಯನ್ನು ವಿರಳವಾಗುವಂತೆ ಮಾಡಿ ಅದರ ಒತ್ತುವಿಕೆಯನ್ನು ಕಡಿಮೆ ಮಾಡುವದಕ್ಕೆ ಉಷ್ಣತೆಯೇ ಮುಖ್ಯ ಕಾರಣವು. ಉಷ್ಣತೆಯು ಹೆಚ್ಚಾದರೆ ಹವೆಯ ಒತ್ತುವಿಕೆಯು ಕಡಿಮೆಯಾಗುವದೆಂಬ ವಿಷಯವನ್ನು ಹಿಂದೆ ವಿಚಾರ ಮಾಡಿರುತ್ತೇವೆ. ಒಂದು ಪ್ರದೇಶದಲ್ಲಿ ಹವೆಯು ಕಾದರೆ ಅದು ಹಗುರವಾಗಿ ಮೇಲಕ್ಕೇರಿ ಆದರ ಸ್ಥಳವನ್ನು ಆಕ್ರಮಿಸಿಕೊಳ್ಳುವದಕ್ಕೆ ತಂಪಾದ ಹವೆಯು ಬರುವದು. ಉಷ್ಣವು ಗಾಳಿಯಲ್ಲಿ ಚಲನೆಯನ್ನುಂಟುಮಾಡುತ್ತದೆಂಬುವದಕ್ಕೆ ಒಂದು ನಿದರ್ಶನವನ್ನು ಹೇಳಬಹುದು. ಒಂದು ಮನೆಗೆ ಬೆಂಕಿ ಬಿದ್ದು ಉರಿಯುತ್ತಿರುವಾಗ ಮೊದಲು ಶಾಂತವಾಗಿದ್ದ ಹವೆಯು ಬೆಂಕಿ ತಗಲಿದ ಸ್ವಲ್ಪ ಹೊತ್ತಾದ ಮೇಲೆ ಎಲ್ಲಾ ದಿಕ್ಕುಗಳಿಂದಲೂ ವೇಗದಿಂದ ಬೆಂಕಿಯ ಕಡೆಗೆ ಬೀಸುವದು. ಇದರ ಕಾರಣವನ್ನು ಹೇಳಬೇಕಾದರೆ, ಬೆಂಕಿಯು ಉರಿಯುವಾಗ ಅದರ ಸಮೀಪದಲ್ಲಿರುವ ಗಾಳಿಯು ಕಾದು ಹಗುರವಾಗಿ ಮೇಲಕ್ಕೇರುತ್ತದೆ; ಅದು ಮೇಲಕ್ಕೇರಲು ಅದರ ಸ್ಥಳವನ್ನು ತುಂಬಿಕೊಳ್ಳುವದಕ್ಕೆ ಸುತ್ತಲು ಇರುವ ಗಾಳಿಯು ಬರುತ್ತದೆ.