ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರಂಪಾರ ೧೨೩

  ಅವರು ದಿಂಬುಗಳಿಗೆ ಒರಗಿ ಕುಳಿತುಕೊಳ್ಳಲು ಅಪರಂಪಾರನೂ ಸಿದ್ಧಲಿಂಗನೂ ನೆರ ವಾದರು. ಚಾಚಿಕೊಂಡಿದ್ದ ಕಾಲುಗಳಲ್ಲಿ ಒಂದು ಮಾತ್ರ ಮಿಸುಕುತ್ತಿತ್ತು.
  ಸ್ವಾಮಿಗಳೆಂದರು:
  "ಎಡವಾಗಲು ಕೈ ಕೋರಡು.ಪಾರ್ಶ್ವವಾಯು. ನಾನು ಓಡಾಡುವುದು ಮಹಾದೇವಗೆ ಇಷ್ಟವಿಲ್ಲ.ಮಲಗಿದ್ದಲ್ಲೇ ಇರು–ಎನ್ನುತಾನೆ." 
  ಸಿದ್ಧಲಿಂಗನ ಕಣ್ಣುಗಳಿಂದ ಕಂಬನಿ ತೊಟ್ಟಿಕ್ಕಿತು.ಅಪರಂಪಾರನ ಗಂಟಲು ಕಟ್ಟಿತು.
  ಒರಗಿದ್ದಲ್ಲಿನಿಂದ ಸ್ವಾಮಿಗಳು ಅಪರಂಪಾರನನ್ನು ಕಣ್ತುಂಬ ನೋಡಿದರು.ಅವರೆಂದರು:
  "ಬೆಳೆದು ದೊಡ್ಡವನಾಗಿದೀಯೆ. ಪಟಕ್ಕಿಟ್ಟ ಚಿನ್ನವಾಗಿದೀಯೆ."
  ಅಪರಂಪಾರ ಮಾತಿಲ್ಲದೆ ನಿಂತ.
  ನೆಲದ ಮೇಲೆ ಕುಳಿತುಕೊಳ್ಳುವಂತೆ ಅವರಿಬ್ಬರಿಗೂ ಸ್ವಾಮಿಗಳು ಸನ್ನೆಮಾಡಿದರು.
  "ರಾಜ್ಯ ರಥದ ಗಾಲಿ ಕೀಲಿಲ್ಲೆದೆ ಮುಗ್ಗರಿಸಿದೆಯಲ್ಲ.ಅಪರಂಪಾರ? ಕಡೆಗೀಲಿಲ್ಲದೆ ಬಂಡಿ ಹೊಡೆಗೆಡವಿತು; ಕಡೆಗೀಲು ಬಂಡಿಗಾಧಾರ...ಈಗೇನು ಮಾಡುವೆಯಪ್ಪ? ಮಣಿಯನೆಣಿಸಿ ದಿನ ಕಳೆಯುತೀಯಾ?"
  ಒಂದು ಕ್ಷಣ್ ನೆಲ ನೋಡುತ್ತಲಿದ್ದು,ತಲೆಯೆತ್ತಿ, ಅಪರಂಪಾರನೆಂದ:
  "ಇಲ್ಲ,ಗುರುಗಳೆ, ನನ್ನ ಕರ್ತವ್ಯ ನಾನು ಪಾಲಿಸುತ್ತೇನೆ."
  "ವೀರಪ್ಪಾಜಿಯಾಗಿ ಅದನ್ನು ಮಾಡತೀಯೋ? ಅಪರಂಪಾರನಾಗಿಯೋ?"  
  "ನಾನೆಂಬಹಂಕಾರದಲ್ಲಿ ನಾನುಂಡೆನಾದರೆ ಎನಗದೇ ಭಂಗ.ಸ್ತುತಿನಿಂದೆಗೆ ನೊಂದೆನಾದಡೆ ಅಂಗೈಯಲ್ಲಿದ್ದ ಗುಹೇಶ್ವರಲಿಂಗಕ್ಕೆ ದೂರ."
  "ಸಂತೋಷವಪ್ಪ...ಜನ ಏನೆನ್ನುತಿದಾರೆ?"
  "ಅವರ ಪಾಲಿಗೆ ಇದು ಅನಿರೀಕ್ಷಿತ ಆಘಾತ. ಮಂಕಾಗಿದಾರೆ. ಅವರನ್ನು ಎಚ್ಚರಿಸ ಬೇಕು." 
  "ಅಪರಂಪಾರ, ಅಗ್ನಿ ಸುಡಲಲ್ಲದೆ ಸುಳಿಯಲರಿಯದು. ವಾಯು ಸುಳಿವುದಲ್ಲದೆ ಸುಡ ಲರಿಯದು. ಅಗ್ನಿ ವಾಯು ಕೂಡಿದಲ್ಲದೆ ಅಡಿ ಇಡಲರಿಯದು...ಜನರ ದೇಶಾಭಿಮಾನ ಬೂದಿ ಮುಚ್ಚಿದ ಕೆಂಡವಾಗಿರತದೆ. ಆ ಬೂದೀನ ಚೆದರಿಸಿ ಜ್ವಾಲೇನ ಅಣಿಗೊಳಿಸತೀಯಾ?"
  "ತಮ್ಮ ಆಶೀರ್ವಾದಬಲದಿಂದ ಇಷ್ಟನ್ನು ಮಾಡಲಾರೆನೆ?"
  "ಪಣತೆಯೂ ಇದೆ,ಬತ್ತಿಯೂ ಇದೆ. ತೈಲ ಒಂದಿದ್ದರಾಯಿತು. ಜ್ಯೋತಿ ಬೆಳಗುತದೆ ...ಕೊಡಗಿನ ಮನೆಮನೆಯೂ ಪಣತೆ. ಸತ್ಪ್ರಜೆಗಳೆಲ್ಲ ಬತ್ತಿಗಳು. ನೀನು ತೈಲವಾಗಿ ಅವರನ್ನು ತೋಯಿಸು. ಸ್ವಾತಂತ್ರ್ಯದ ಜ್ಯೋತಿಯುರಿದು ಆ ಪ್ರಭೆ ಕತ್ತಲೆಯನ್ನು ಓಡಿಸತದೆ."
  "ನಾನು ತೈಲವಾಗಿ ತೋಯಿಸುತೇನೆ ಎನ್ನುವುದು ಅಹಂಭಾವದ ಮಾತು, ಮಹಾದೇವ ನನ್ನಿಂದ ಮಾಡಿಸತಾನೆ ಅಂದೇನು."
  "ಸರಿ.ಸರಿ...ವೇಲೂರಿಗೆ ಹೋಗಿ ಬರತೀಯೊ ?"
  "ಅಪ್ಪಣೆ.” 
  "ಹೇಗೆ ಕಾರ್ಯಪ್ರವೃತ್ತನಾಗತೀಯೆ?" 
  "ನಾನು ತಿಳಕೊಂಡಿರೋ ಹಾಗೆ ಇದು ಇಡೀ ಹಿಂದೂಸ್ಥಾನದ ಪ್ರಶ್ನೆ,ನಮ್ಮ ಪ್ರದೇಶದಲ್ಲಂತೂ ಮೂರು ರಾಜ್ಯಗಳಿಗೆ ಒಂದೇ ಬಗೆಯ ಸ್ಥಿತಿ ಪ್ರಾಪ್ತವಾಗಿದೆ. ಮೈಸೂರು.