ಈ ಪುಟವನ್ನು ಪ್ರಕಟಿಸಲಾಗಿದೆ
೯೬
ಹಳ್ಳಿಯ ಚಿತ್ರಗಳು

ಮಾದನ ಕೂಗನ್ನು ಕೇಳಿ, ಬೀದಿಯ ಜನವೆಲ್ಲಾ ಶೀನಪ್ಪನ ಬಾಗಿಲಿನಲ್ಲಿ ನೆರೆದು ಬಿಟ್ಟಿತು. ವೆಂಕ್ಟಾಚಾರಿ ಮಾತ್ರ ನಗುತ್ತಾ ಕುಳಿತಿದ್ದನು. ನಾನು ಶೀನಪ್ಪನನ್ನು ಕುರಿತು, "ಏನಯ್ಯ ಇದು ಅವಾಂತರ" ಎಂದೆ. ಅವನು ವೆಂಕ್ಟಾಚಾರಿಯ ಕಡೆ ನೋಡುತ್ತಾ "ಇವನ ಮನೆ ಹಾಳಾಯ್ತು, ಎಲ್ಲಾ ಈ ಪಿಶಾಚಿಯ ಚೇಷ್ಟೆ” ಎಂದನು. ವೆಂಕ್ಟಾಚಾರಿಯ ಕಡೆ ನೋಡಿದೆ. ಭೀಮನು ದುರ್ಯೋಧನನ್ನು

“ಹರಿಸಂಧಾನಕ್ಕೆ ವಂದಂದವಘಡಿಸಿದಹಂಕಾರ ಮೆಲ್ಲಿತ್ತೊ" ಎಂದು ಮೂದಲಿಸಿದಂತೆ "ಆ ದಿವಸ ಇಡ್ಲಿ ಬೆಣ್ಣೆ ನುಂಗಿದ ಜಂಭ ಎಲ್ಲಿ ಹೋಯ್ತ? ಈಗ ಕಕ್ಕು” ಎಂದನು.

ಎಲ್ಲರೂ ಘೊಳ್ಳೆಂದು ನಕ್ಕೆವು. ಶೀನಪ್ಪನೂ ನಕ್ಕನು. ಮಾದನಿಗೆ ವಿಷಯವನ್ನೆಲ್ಲಾ ತಿಳಿಸಿ, ವೆಂಕ್ಟಾಚಾರಿಯು ತನ್ನ ಮನೆಗೆ ಕರೆದುಕೊಂಡು ಹೋಗಿ, ಅವನಿಗೆ ತಿಂಡಿಯನ್ನೂ ಪ್ರಸಾದವನ್ನೂ ಕೊಟ್ಟು ಕಳುಹಿಸಿದನು. ಶೀನಪ್ಪ ಮಾತ್ರ "-ಮಗ ವೆಂಕ್ಟಾಚಾರಿ ಇಷ್ಟು ಉಪಾಯಗಾರನೆಂದು ನಾನು ತಿಳಿದಿರಲಿಲ್ಲಾ" ಎಂದನು.

೫. ಮುಯ್ಯಿಗೆ ಮುಯ್ಯಿ

ಕಿಟ್ಟುವಿನ ಹೊಟ್ಟೆಯ ಆಳ ಅವನ ತಾಯಿಗೆ ಮಾತ್ರ ಗೊತ್ತಿದ್ದಿತೇನೋ? ಅವನಿಗೆ ತಿಂಡಿಕೊಟ್ಟು ತೃಪ್ತಿಪಡಿಸಿದವರನ್ನು ನಾನು ಇದುವರೆಗೆ ಎಲ್ಲೂ ನೋಡಲಿಲ್ಲ. ಅವರ ಅಜ್ಜಿ ಒಬ್ಬರು ಮಾತ್ರ ಕಿಟ್ಟುವಿಗೆ ಬೇಕಾದಷ್ಟು ದೋಸೆಯನ್ನು ಕೊಟ್ಟು, ಅವನ ಬಾಯಿಂದ "ಹೊಟ್ಟೆ ತುಂಬಿತು" ಅನ್ನಿಸಿದ್ದರಂತೆ. ಅವರ ಅಜ್ಜಿಯು ಸತ್ತು ಹೋಗುವಾಗ ಕಿಟ್ಟುವಿನ ತಾಯಿಯೊಂದಿಗೆ "ಯಾವುದು ಎಲ್ಲಾದರೂ ಹೋಗಲಿ. ಕಿಟ್ಟುವಿಗೆ ಮಾತ್ರ ೬ ದೋಸೆ ನಿತ್ಯ ಕೊಡುವುದನ್ನು ಮರೆಯಬೇಡ” ಎಂಬುದಾಗಿ ಹೇಳಿದ್ದರಂತೆ. ಆರು ದೋಸೆ ಎಂದರೆ, ಈಗ ಹೋಟಲಿನಲ್ಲಿ ಎರಡುಕಾಸಿಗೆ ಒಂದರಂತೆ ಕೊಡುತ್ತಾರಲ್ಲ, ಅರಳಿ ಎಲೆಯಷ್ಟು ಅಗಲವಾಗಿ ತೆಳ್ಳಗಿರುವುದು; ಈ ತರದ ದೋಸೆಯಲ್ಲ. ಹೋಟಲಿನ ದೋಸೆ ಒಂದು 'ಗ್ರೋಸ್' ಕೊಟ್ಟಿದ್ದರೂ, ಕಿಟ್ಟುವಿಗೆ ಹೊಟ್ಟೆ ತುಂಬುತ್ತಿರಲಿಲ್ಲ. ಅವರ