ಈ ಪುಟವನ್ನು ಪ್ರಕಟಿಸಲಾಗಿದೆ
೧೦೦
ಹಳ್ಳಿಯ ಚಿತ್ರಗಳು

ಅದರಿಂದ ಚೆನ್ನಾಗಿ ತೆಳುವಾಗಿ ಅಗಲವಿಲ್ಲದಿದ್ದ ೭-೮ ಬೆರಣಿಗಳನ್ನು ಜೋಡಿಸಿಕೊಂಡು, ಬೀದಿಗೆ ಹೋಗಿ, ಸಣ್ಣ ಮರಳನ್ನು ಒಂದು ಸೇರಿನಷ್ಟು ಚೌಕದಲ್ಲಿ ಕಟ್ಟಿಕೊಂಡು ಒಳಕ್ಕೆ ಬಂದ. ನರಹರಿಯು ಭಯಂಕರ ಧ್ವನಿಯಲ್ಲಿ ಗೊರಕೆ ಹೊಡೆಯುತ್ತಿದ್ದ.

ಕಿಟ್ಟುವು ತಿಂಡಿಯ ಗಂಟಿನ ಸಜ್ಜಪ್ಪವನ್ನೆಲ್ಲಾ ತೆಗೆದುಕೊಂಡ. ಅದರ ಜಾಗದಲ್ಲಿ ಬೆರಣಿಯನ್ನು ಇಟ್ಟ. ಅರಳುಹಿಟ್ಟನ್ನೆಲ್ಲಾ ತನ್ನ ಚೌಕಕ್ಕೆ ಸುರಿದುಕೊಂಡು ಅಲ್ಲಿ ಸಣ್ಣ ಮರಳನ್ನಿಟ್ಟ. ಗಂಟನ್ನು ಮೊದಲಿನಂತೆಯೇ ಕಟ್ಟಿ, ಅದು ಇದ್ದ ಕಡೆಯೇ ಇಟ್ಟು ಮಲಗಿಬಿಟ್ಟ. ಅವನಿಗೂ ಬೇಗ ನಿದ್ರೆ, ಬಂದುಬಿಟ್ಟಿತು. ಬೆಳಗಾಯಿತು.

ಕಿಟ್ಟುವು ಆ ದಿವಸವಂತೂ ನರಹರಿಗೆ ತಿಂಡಿಯ ಗಂಟನ್ನು ಬಿಚ್ಚಲು ಅವಕಾಶವನ್ನೇ ಕೊಡಲಿಲ್ಲ. ರಾತ್ರಿ ಕಿಟ್ಟುವೇ ಮೊದಲು ಮಲಗಿಬಿಟ್ಟ. ಅವನು ಮಲಗಿದ ೨೦ ನಿಮಿಷಗಳನಂತರ ನರಹರಿಯು ದೀಪವನ್ನು ಆರಿಸಿ ಮಲಗಿಕೊಂಡ. ೫ ನಿಮಿಷ ಬಿಟ್ಟು ಮೆಲ್ಲನೆ ಗಂಟನ್ನು ಬಿಚ್ಚಿ, 'ಸಜ್ಜಪ್ಪ'ದ ಗಂಟಿನಿಂದ ಒಂದು ಚೂರನ್ನು ಬಾಯಿಗೆ ಹಾಕಿಕೊಂಡ. ಕೂಡಲೆ ಥೂ, ಥೂ ಎಂಬುದಾಗಿ ಉಗಳಿದ. ಅನಂತರ ಅರಳು ಹಿಟ್ಟಿನ ಗಂಟಿನಿಂದ ಒಂದು ಹಿಡಿ ಬಾಯಿಗೆ ಹಾಕಿಕೊಂಡ. ಹಲ್ಲೆಲ್ಲಾ ಮುರಿಯುವಂತಾಯ್ತು. ಅದನ್ನೂ ಉಗಳಿ "ಪಿಶಾಚಿ-ಗಂಡನ ಮನೆ ಹಾಳಾಯ್ತು" ಎಂದು ಗೊಣಗುಟ್ಟಿದ. ಆದರೂ ಹೇಗೋ ಸಹಿಸಿಕೊಂಡು ಸುಮ್ಮನಿದ್ದ. ಬೆಳಗಾಯಿತು.

ನರಹರಿ ಕಿಟ್ಟುವನ್ನು ತಿಂಡಿಯ ವಿಷಯ ಕೇಳಲೇ ಇಲ್ಲ. ತನ್ನ ಜಿಪುಣತನ ಕಿಟ್ಟುವಿಗೆ ತಿಳಿದುಹೋಯಿತಲ್ಲಾ ಎಂದು ಅವನಿಗೆ ನಾಚಿಕೆಯಾಯಿತು. ಕಿಟ್ಟು ಕೂಡ ಆ ವಿಚಾರ ಮಾತಾಡಲೇ ಇಲ್ಲ. ಬೆಳಗಾದ ಕೂಡಲೆ, ಆಗ ತಾನೆ ಹಾಸನಕ್ಕೆ ಬಂದಿದ್ದ ಕಿಟ್ಟುವಿನ ತಂದೆ, ಗಂಟನ್ನಿಡಲು ಕೊಠಡಿಗೆ ಬಂದರು. ಕಿಟ್ಟುವು ತನ್ನ ಕೊಠಡಿಯಲ್ಲಿ ನೀರು ಕುಡಿಯಲು, ೩ ದಿವಸ ಮುಂಚೆ ಒಂದು ಮಣ್ಣಿನ ಹೂಜೆಯನ್ನು ತಂದಿಟ್ಟಿದ್ದನು. ಅದು ಅವರ ತಂದೆಯ ಕಣ್ಣಿಗೆ ಬಿತ್ತು. ಅವರು ಕೂಡಲೆ "ಇದೇನು ಸಾಬರಂತೆ ನೀವೂ ಹೂಜಿಯಿಂದ ನೀರು ಕುಡೀತೀರಾ? ವೈದೀಕನ ಹೊಟ್ಟೇಲಿ ಹುಟ್ಟಿದ್ದಕ್ಕೆ ಸಾರ್ಥಕವಾಯಿತು. ಈ ಹೂಜೆಯನ್ನು ಬಿಸಾಡು.