ಪೋಲಿಸಿನವರು ಅಲ್ಲಿಗೆ ಬರುವಂತೆ ಮಾಡಬೇಕೆಂದು ಯೋಚಿಸಿದನು. ಆದರೆ, ಬಾಯಿಯಿಂದ ಧ್ವನಿಯೇ ಹೊರಡಲಿಲ್ಲ. ಅವರಿಗೆಲ್ಲಾ ಒಂದು ಉಪನ್ಯಾಸ ಮಾಡಿ ಬಲಾತ್ಕಾರ ವಿವಾಹದ ಅನರ್ಥಗಳನ್ನು ಅವರಿಗೆ ವಿವರಿಸಬೇಕೆಂದು ಯೋಚಿಸಿದನು. ಅವನ ಮೆದುಳು ವಿಕಾರವನ್ನು ಹೊಂದಿಬಿಟ್ಟಿದ್ದಿತು. ನಾಲಗೆಯು ತೊದಲಿ ಹೋಯಿತು. ಬಾಯಿಯಿಂದ ಮಾತೇ ಹೊರಡಲಿಲ್ಲ. ಸುತ್ತ ನಿಂತಿದ್ದವರಿಗೆ ಇವನು ಸುಮ್ಮನೆ ತುಟಿಗಳನ್ನು ಅಲ್ಲಾಡಿಸುತ್ತಿರುವುದು ಮಾತ್ರ ಕಾಣುತ್ತಿದ್ದಿತು.
ಪೈಲ್ವಾನನು ಅವನನ್ನು ಹಸೆಯ ಮಣೆಗೆ ಎಳೆದುಕೊಂಡು ಬಂದನು. ಪುರೋಹಿತನು ಭಯಂಕರವಾದ ಧ್ವನಿಯಲ್ಲಿ “ಓಂ ನಮಃಸ್ಸದಸೇ" ಎಂದು ಪ್ರಾರಂಭಿಸಿದನು. ಬಾಗಿಲಿನಲ್ಲಿ ವಾದ್ಯದವರು ಓಲಗವನ್ನು ಊದಿದರು. ಹೆಣ್ಣನ್ನು ಹಸೆಯ ಮಣೆಯ ಮೇಲೆ ತಂದು ಕೂರಿಸಿದರು. ಸುಮಂಗಲೆಯರು ಹಾಡುಗಳನ್ನು ಹಾಡಿದರು. ಉತ್ತರ ಕ್ಷಣದಲ್ಲಿಯೇ ಸುಮುಹೂರ್ತಾ ಸಾವಧಾನ; ಸುಲಗ್ನಾ ಸಾವಧಾನ" ಆಗಿಹೋಯಿತು. ಇದೆಲ್ಲಾ ನಡೆಯುತ್ತಿರುವಾಗ ಶೀನಪ್ಪನು ಸ್ವಪ್ನ ರಾಜ್ಯದಲ್ಲಿದ್ದಂತೆ ಇದ್ದನು.
ಮದುವೆಯಾದ ಮೇಲೆ ಶೀನಪ್ಪನು "ನಾನು ಇನ್ನು ೧೨ ವರ್ಷ ನಿಷೇಕ ಪ್ರಸ್ತಮಾಡಿಕೊಳ್ಳುವುದಿಲ್ಲ" ಎನ್ನುತ್ತಿದ್ದನು. ಈಗ ಅವನ ಹೆಂಡತಿ ದೊಡ್ಡವಳಾಗಿ ಇನ್ನೂ ೬ ವರ್ಷ ಪೂರ್ತಿಯಾಗಿಲ್ಲ. ಮೂರು ಮಕ್ಕಳಿವೆ. ಮದುವೆಯಲ್ಲಿ ಪೈಲ್ವಾನನಾಗಿದ್ದವನು ಈಗ ಆವನ ಪರಮ ಮಿತ್ರನಾಗಿದ್ದಾನೆ.