ಈ ಪುಟವನ್ನು ಪ್ರಕಟಿಸಲಾಗಿದೆ
೧೧೪
ಹಳ್ಳಿಯ ಚಿತ್ರಗಳು

ಪ್ರಾರಂಭಿಸಿಬಿಟ್ಟನು. ಅವನಿಗೆ ಬೇಸರಿಕೆಯಾಗಲಿ ಕಷ್ಟವಾಗಲಿ ಆದಂತೆ ತೋರಲಿಲ್ಲ. ಪುಳ್ಚಾರಿನವನಾದ ನನಗೆ ಗುದ್ದಲಿಯಿಂದ ನಾಲ್ಕು ಪೆಟ್ಟು ನೆಲಕ್ಕೆ ಬಿಡುವ ವೇಳೆಗೆ ಮೈಯೆಲ್ಲಾ ಬೆವತುಹೋಯಿತು. ಸೊಂಟ ನೋಯುವುದಕ್ಕೆ ಪ್ರಾರಂಭವಾಯಿತು. ಇವನ ಹತ್ತಿರ ಅನ್ಯಾಯವಾಗಿ ಹಟ ತೊಟ್ಟು ಕೆಟ್ಟೆನಲ್ಲಾ ಎನ್ನಿಸಿತು. ಸುಧಾರಿಸಿಕೊಳ್ಳಲು ಒಂದು ಗಳಿಗೆ ನಿಲ್ಲುವುದಕ್ಕೂ ನನಗೆ ಧೈರ್ಯವಿರಲಿಲ್ಲ. ನಿಂತರೆ ಕೆಲಸವು ಹಿಂದಾಗುವುದು. ಬೋರನು "ನಾನು ಹೇಳಲಿಲ್ಲವೆ? ತುಪ್ಪ ತಿಂದ ಮೈ ತುಪ್ಪದಂತೆ ಮೆದು” ಎಂದು ಬಿಡುತ್ತಿದ್ದನೆಂಬ ಭಯ. ಈ ಉಭಯ ಸಂಕಟಕ್ಕೆ ಸಿಲುಕಿ ಹಾಗೂ ಹೀಗೂ ಅಗೆಯುತ್ತಾ ಇದ್ದೆ.

ಒಮ್ಮಿಂದೊಮ್ಮೆ ಬೋರನು ಗುದ್ದಲಿಯನ್ನು ಕೆಳಗಿಟ್ಟು ಗಾಳಿಗೆ ಕಿವಿಗೊಟ್ಟು ಆಲಿಸತೊಡಗಿದನು. ಸದ್ಯ ಸಮಯ ದೊರೆತದ್ದೇ ಸಾಕೆಂದು ನಾನೂ ಗುದ್ದಲಿಯನ್ನು ಕೆಳಗಿಟ್ಟು-

"ಏನು ಬೋರ, ಆಕಾಶವಾಣಿ ಕೇಳುತ್ತಿರುವುದೊ? ಅಥವ ದೇವಸ್ತ್ರೀಯರೇನಾದರೂ ನಿನ್ನ ಕಿವಿಯಲ್ಲಿ ಗುಟ್ಟನ್ನು ಹೇಳುತ್ತಿರುವರೋ" ಎಂದೆ.

ಬೋರನು ನನ್ನ ಮಾತಿಗೆ ಲಕ್ಷ್ಯವನ್ನು ಕೊಡಲಿಲ್ಲ. ಜಿಗುಪ್ಪೆಯಿಂದ, “ತಡೀರಿ ಸ್ವಾಮಿ" ಎಂದುಬಿಟ್ಟು ಮೊದಲಿನಂತೆಯೇ ಆಲಿಸುವುದಕ್ಕೆ ಪ್ರಾರಂಭಿಸಿದ. ನೋಡೋಣವೆಂದು ನಾನೂ ಕಿವಿಗೊಟ್ಟು ಕೇಳಿದೆ. ದೂರದಲ್ಲಿ ಗುಡುಗಿನಂತೆ ಶಬ್ದವಾಗುತ್ತಲಿದ್ದಿತು. ಪ್ರತಿ ಕ್ಷಣದಲ್ಲೂ ಹೆಚ್ಚು ಹೆಚ್ಚಾಗಿ ಕೇಳಿಸುತ್ತಿದ್ದಿತು. ಆಕಾಶವಿಮಾನವೇನಾದರೂ ನಮ್ಮ ಮೇಲೆ ಹೋಗುತ್ತಿರುವುದೇನೋ ಎಂದು ಅಂತರಿಕ್ಷದಕಡೆ ನೋಡಿದೆ. ಒಂದೆರಡು ಹಕ್ಕಿಗಳು ಮಾತ್ರ ಕಂಡವು. ಸ್ವಲ್ಪ ಹೊತ್ತಿನೊಳಗಾಗಿ ಶಬ್ದವು ಬಹಳ ಜೋರಾಗಿಯೂ ಸ್ಪಷ್ಟವಾಗಿಯೂ ಕೇಳಿಸಿತು. ಬೋರನು “ಇದೆಂತಹ ಶಬ್ದ ಸ್ವಾಮಿ, ಭೂಮಿಯೇ ನಡುಗುವಂತೆ ತೋರುತ್ತದೆ" ಎಂದನು. ನಾನು ನಗುತ್ತಾ "ಭೂಮಿಯ ನಡುಗುವುದಿಲ್ಲ ಆಕಾಶವೂ ನಡುಗುವುದಿಲ್ಲ, ಈ ಕಡೆಗೆ ಯಾವುದೋ ಮೋಟಾರ್ ಬರುತ್ತಿರಬೇಕು” ಎಂದೆ. ಬೋರನು "ಮೋಟಾರ್ ಅಲ್ಲ ಸ್ವಾಮಿ, ನಾನೇನು ಮೋಟಾರ್ ಕಂಡಿಲ್ಲವೆ. ಮೋಟಾರ್ ಎಂದಿಗೂ ಇಷ್ಟು ಶಬ್ದ ಮಾಡುವುದಿಲ್ಲ” ಎಂದನು.