ಒಂದುಕಡೆ ರಸ್ತೆ ಸ್ವಲ್ಪ ಹಳ್ಳವಾಗಿದ್ದಿತು. ಬಸ್ಸು ಬೆದರಿದ ಕುದುರೆಯಂತೆ ನೆಗೆದು ಕೆಳಕ್ಕೆ ಕುಕ್ಕರಿಸಿತು. ಆದರೆ ನಿಲ್ಲಲಿಲ್ಲ. ಮುಂದಕ್ಕೆ ಹೊರಟಿತು. ಆ ಕುಕ್ಕರಿಸಿದ ವೇಗಕ್ಕೆ ವ್ಯಾಸ್ಕೊಡಗಾಮನು ಕುಳಿತಿದ್ದ 'ಸೀಟಿನ' ಮೆತ್ತೆಯು ಕೆಳಕ್ಕೆ ಬಿದ್ದುಹೋಯಿತು. ಎದುರು ಬದರಾಗಿ ಕುಳಿತಿದ್ದ ನಾವಿಬ್ಬರೂ ಒಬ್ಬರ ಮೇಲೊಬ್ಬರು ಬಿದ್ದೆವು. ಊರನ್ನು ತಲುಪಿದ ಕೂಡಲೆ ವ್ಯಾಸ್ಕೊಡಗಾಮನು ತನ್ನ ಮನೆಯ ಮುಂದೆ ಬಸ್ಸನ್ನು ನಿಲ್ಲಿಸಿ, ಎಣ್ಣೆಯ ಡಬ್ಬದ ಕೆಳಗೆ ಒಂದು ಕೈ, ಮೇಲಕ್ಕೆ ಒಂದು ಕೈ ಹಾಕಿ ಮೆಲ್ಲನೆ ಎತ್ತಿದನು. ಆದರೆ ಡಬ್ಬ ಬಹಳ ಹಗುರವಾಗಿ ಕೈಗೆ ಬಂದಿತು. ಅವನು, ತುಂಬಿದ ಡಬ್ಬವನ್ನು ಅಷ್ಟು ಸುಲಭವಾಗಿ ಎತ್ತಿದುದನ್ನು ಕಂಡು, ನನಗೂ ಆಶ್ಚರವಾಯಿತು. ವ್ಯಾಸ್ಕೊಡಗಾಮನು ಹುಚ್ಚನಂತೆ ನನ್ನ ಕಡೆಯೇ ನೋಡುತ್ತ ನಿಂತುಬಿಟ್ಟನು. ಆಮೇಲೆ ಡಬ್ಬವನ್ನು ಕೆಳಗಿಟ್ಟು ಸಕ್ಕರೆಯ ಗಂಟನ್ನು ಎತ್ತಿಕೊಂಡನು. ಅದರಿಂದ ಎಣ್ಣೆಯು ಧಾರಾಕಾರವಾಗಿ ತೊಟ್ಟಿಕ್ಕುತ್ತಿದ್ದಿತು. ಎಣ್ಣೆಯ ಡಬ್ಬವು ಕುಲುಕಾಟದಲ್ಲಿ ಒಡೆದುಹೋಗಿ, ಆ ಎಣ್ಣೆಯು ಸಕ್ಕರೆಯೊಂದಿಗೆ ಬೆರೆತು ಕರಗಿ ಬಸ್ಸಿನ ತಳಭಾಗವೆಲ್ಲಾ ಅಂಟಾಗಿದ್ದಿತು. ವ್ಯಾಸ್ಕೊಡಗಾಮನಿಗೆ ಬಹಳ ಸಂಕಟವಾಗಿರಬೇಕು. ನಾಲ್ಕಾಣೆಯ ಲಾಭಕ್ಕೆ ಆಸೆಪಟ್ಟು ಅವನು ಹತ್ತು ರೂಪಾಯಿನ ಸಾಮಾನು ಕಳೆದುಕೊಂಡನು. ನನ್ನ ಕಡೆ ನೋಡಿ “ಮುಳುಗಿದೆ ಸ್ವಾಮಿ, ಮುಳುಗಿದೆ” ಎಂದನು. ವ್ಯಾಸ್ಕೊಡಗಾಮನು ಮತ್ತೆ ಏಜೆಂಟ್ ಆಗಲಿಲ್ಲ. ಈಗ ಗಾಡಿ ಮಾಡಿಕೊಂಡೇ ಸಾಮಾನುಗಳನ್ನು ತರುತ್ತಿದ್ದಾನೆ. ಆಮೇಲೆ ೧೫-೨೦ ದಿವಸಗಳವರೆಗೆ ಎಣ್ಣೆ ಮತ್ತು ಸಕ್ಕರೆಯು ಸೇಚನವಾಗಿದ್ದ ಬಸ್ಸಿಗೆ ನೊಣಗಳು ಮುತ್ತಿ 'ಝ್ಯೆಯ್' ಎಂದು ಸಂಗೀತವನ್ನು ಹಾಡುತ್ತಿದ್ದವು. ಅವುಗಳನ್ನು ಓಡಿಸುವುದೇ ಪ್ರಯಾಣಿಕರಿಗೆ ಕೆಲಸವಾಗಿ ಹೋಯಿತು.
೩. ಭಟ್ಟನ ಸಂಪಾದನೆಯ ಮಾರ್ಗ
ವ್ಯಾಸ್ಕೊಡಗಾಮನ ಅನಂತರ ನನ್ನ ಸ್ನೇಹಿತ ನಾರಾಯಣಭಟ್ಟ ಬಸ್ಸಿನ ಏಜೆಂಟಾದ. ಅವನು ಏಜೆಂಟಾಗುವುದಕ್ಕೆ ಅವನು ಒಂದು ವಿಧದಲ್ಲಿ