ಈ ಪುಟವನ್ನು ಪ್ರಕಟಿಸಲಾಗಿದೆ

ಕಾಳಿಯ ಹೃದಯ


ನಮ್ಮ ಊರು ಪೇಟೆಯಲ್ಲಿ ಕಾಳಮ್ಮನೆಂಬ ಐವತ್ತು ವಯಸ್ಸಿನ ಹೆಂಗಸೊಬ್ಬಳಿದ್ದಳು. ಅವಳ ಬಣ್ಣವು ಹೆಸರಿಗೆ ತಕ್ಕಂತೆ ಕರಿಯಮೋಡದ ಬಣ್ಣವಾಗಿದ್ದಿತು. ಅವಳ ಸ್ವಭಾವವೂ ಕೂಡ ಬಹಳ ದುಡುಕಾದುದು ಮತ್ತು ಕಠಿಣವಾದುದು. ಅವಳ ಬಾಯಿನಿಂದ ಒಂದೇ ಒಂದು ಒಳ್ಳೆಯ ಮಾತನ್ನು ಕೇಳಿದವರು ನಮ್ಮ ಊರಿನಲ್ಲಿ ಯಾರೂ ಇಲ್ಲ. ಅವಳಿಗೆ ಮದುವೆಯಾಗಿದ್ದಿತೋ ಇಲ್ಲವೊ ನನಗೆ ತಿಳಿಯದು. ಅವಳು ಯಾವ ಜಾತಿಯೋ ನಾನು ಕಾಣೆ. ನಮ್ಮ ಊರಿನಲ್ಲಿ ಯಾರೂ ಅವಳ ಹತ್ತಿರ ಮಾತುಕಥೆಗಳನ್ನಾಡಿ ಅವಳಿಗೆ ಗೆಳತಿಯರಾಗಿದ್ದಂತೆ ನನಗೆ ತೋರಲಿಲ್ಲ. ಅವಳ ಮನೆಯ ಬಾಗಲಿನಲ್ಲಿ ನಿಂತುಕೊಳ್ಳಲು ಎಲ್ಲರಿಗೂ ಹೆದರಿಕೆ. ಕಾಳಮ್ಮ ಬಂದಳು ಎಂದರೆ ಮಕ್ಕಳು ಅಳುವುದನ್ನು ನಿಲ್ಲಿಸಿಬಿಡುತ್ತವೆ. ಅವಳ ಹೊಲಕ್ಕಾಗಲಿ ಹಿತ್ತಲಿಗಾಗಲಿ ದನಕರುಗಳನ್ನು ಯಾರಾದರೂ ಬಿಟ್ಟರೆ ದೇವರೇ ಗತಿ. ತನ್ನ ಕೂಗಿನಿಂದಲೇ ಅವರನ್ನು ಕೊಂದುಬಿಡುತ್ತಿದ್ದಳು. ಹುಡುಗರು ತನ್ನ ಹೊಲದಲ್ಲಿ ತಗರಿಕಾಯಿ ಮುಂತಾದುವನ್ನು ಕುಯ್ಯುತ್ತಿದ್ದರೆ ಅವರನ್ನು ಓಡಿಸಿಕೊಂಡು ಹೋಗಿ ಜುಟ್ಟು ಹಿಡಿದುಕೊಂಡು ಗುದ್ದಿ ಒದ್ದು ಅವರು ಪ್ರಾಣವಿರುವವರೆಗೆ ತನ್ನ ಹೊಲದ ಕಡೆ ತಿರುಗಿಕೂಡ ನೋಡದಂತೆ ಮಾಡಿಬಿಡುತ್ತಿದ್ದಳು. ಇದರಿಂದ ಅವಳ ಹತ್ತಿರಕ್ಕೆ ಯಾರೂ ಸುಳಿಯುತ್ತಿರಲಿಲ್ಲ. ಹೆಂಗಸಿನ ಕೋಮಲತೆಯಂತೂ ಅವಳಿಗೆ ಇರಲೇ ಇಲ್ಲ. ನಮ್ಮ ಊರಿನಲ್ಲಿ ಕೆಲವರು ಅವಳನ್ನು “ಶೂರ್ಪಣಖಿ" ಎಂದು ಕರೆಯುತ್ತಿದ್ದರು. ಮತ್ತೆ ಕೆಲವರು "ಲಂಕಿಣಿ, ಪೂತನಿ" ಎನ್ನುತ್ತಿದ್ದರು. ಆದರೆ ಇದೆಲ್ಲಾ ಅವಳ ಹಿಂದುಗಡೆ. ಅವಳ ಎದುರಿಗೆ ಮಾತನಾಡಲು ಯಾವ ಗಂಡಸಿಗೂ ಹೆಂಗಸಿಗೂ ಧೈರ್‍ಯವಿರಲಿಲ್ಲ.

ಕಾಳಿಯ ನೆರೆಮನೆಯೇ ಚಿಕ್ಕನದು. ಚಿಕ್ಕನ ಹೆಂಡತಿ ಕುರೂಪಿ. ಚಿಕ್ಕನಿಗೆ, ಈ ಕತೆಯಲ್ಲಿ ನಡೆದ ವಿಷಯವನ್ನು ಹೇಳುವ ಕಾಲಕ್ಕೆ ಎರಡು ಮಕ್ಕಳಿದ್ದುವು. ಚಿಕ್ಕನಿಗೂ ಕಾಳಮ್ಮನಿಗೂ ನಿತ್ಯ ವಾಗ್ವಾದ ನಡೆಯು