ಈ ಪುಟವನ್ನು ಪ್ರಕಟಿಸಲಾಗಿದೆ
ಕಾಳಿಯ ಹೃದಯ
೧೩೩

ಅವಳು ತಡಿಯಬೇಕೆಂದು ಪ್ರಯತ್ನಿಸಿದರೂ ಎರಡು ತೊಟ್ಟು ನೀರು ಬಿದ್ದಿತು. ಅಲ್ಲಿದ್ದವರಿಗೆಲ್ಲಾ ಅದನ್ನು ಕಂಡು ಆಶ್ಚರವಾಯಿತು. "ಕಾಳಿಯು ಮಗುವನ್ನು ಮುದ್ದಾಡುವುದೆಂದರೇನು? ಅದನ್ನು ಕಂಡು ಕಣ್ಣೀರು ಸುರಿಸುವುದೆಂದರೇನು? ಈ ಶೂರ್ಪಣಖಿಗೆ ಈ ಕೋಮಲ ಹೃದಯವೆಲ್ಲಿಂದ ಬಂತು?" ಎಂದುಕೊಂಡರವರು. ಇದು ನಡೆದ ನಾಲ್ಕು ತಿಂಗಳಿಗೆ ಕಾಳಮ್ಮನು ಸ್ವರ್ಗಸ್ಠಳಾದಳು. ಅವಳಿಗೆ ಮಕ್ಕಳಿಲ್ಲದುದರಿಂದ ಯಾರೋ ದೂರದ ನೆಂಟನೊಬ್ಬನು ಹೊಸೂರಿಂದ ಬಂದು ಅವಳ ಆಸ್ತಿಯನ್ನೆಲ್ಲ ವಶಪಡಿಸಿಕೊಂಡನು. ಆಗ ಕಾಳಮ್ಮನ ಮನೆಯಲ್ಲಿ ಅವಳು ಚಿಕ್ಕನ ಹುಡುಗಿಗೆ ಕೊಟ್ಟ ಅಳತೆಯ ೩-೪ ಅಂಗಿಗಳು ದೊರೆತವು. ಕ್ರಮೇಣ ಗೊತ್ತಾಯಿತು. ಕಾಳಿಗೆ ಅನೇಕ ವರ್ಷಗಳ ಕೆಳಗೆ ಕುರೂಪಿಯಾದ ಒಂದು ಹೆಣ್ಣು ಮಗುವು ಹುಟ್ಟಿ ಒಂದು ತಿಂಗಳೊಳಗಾಗಿಯೇ ಸತ್ತುಹೋಯಿತಂತೆ ಎಂದು ಯಾರೋ ಹೇಳಿದರು. ಕಾಳಿಯು ಚಿಕ್ಕನ ಹುಡುಗಿಯ ವಿಷಯದಲ್ಲಿ ತೋರಿಸಿದ ಕರುಣೆಯು, ಒಗಟೆಯಾಗಿದ್ದವರೆಲ್ಲಾ, ಇದನ್ನು ಕೇಳಿ "ಓಹೊ” ಎಂದರು.