ಈ ಪುಟವನ್ನು ಪ್ರಕಟಿಸಲಾಗಿದೆ
೧೩೬
ಹಳ್ಳಿಯ ಚಿತ್ರಗಳು

“ಅವನು ಬೇಡ. ನಮ್ಮಲ್ಲಿ ಒಂದು ಹೆಣ್ಣಿದೆ. ಅದನ್ನು ನೀನು ನೋಡಿದರೆ ಸಾಕು. ನನಗೆ ಇಂಟರ್ ಮ್ಯಾರೇಜ್ ಆವಶ್ಯಕವಿಲ್ಲವೆನ್ನುವೆ ಅಥವ ನಿನಗೇ ಇಂಟರ್ ಮ್ಯಾರೇಜ್ ಬೇಕೆನ್ನುವೆ. ಮಲೆನಾಡಿನ ವನಸುಮದಂತೆ ಅವಳೂ ಮಲೆನಾಡಿನಲ್ಲಿ ಬೆಳೆದು ಸ್ವಾಭಾವಿಕವಾದ ಸೌಂದರವುಳ್ಳವಳಾಗಿದ್ದಾಳೆ. ನಿನ್ನ ಕಣ್ಣೆದುರಿಗೆ ಈಗ ತೋರಿಸಿಬಿಡುತ್ತೇನೆ ನೋಡು. ಅವಳಿಗೆ ವಯಸ್ಸು ೧೬ ಇರಬಹುದು. ಆಳು ಎತ್ತರವೂ ಅಲ್ಲ ಕುಳ್ಳೂ ಅಲ್ಲ. ಚಿಗುರಿನಂತೆ ಮೈ ಬಣ್ಣ. ತಾಂಬೂಲಕ್ಕೆ ರಂಗನ್ನು ಕೊಡುವ ಕೆಂಪು ಅಧರ; ಕೆಂಪು ಅಂಚಿನ ನೀಲಿಯ ಸೆರಗಿನ ಸೀರೆಯನ್ನು ಉಟ್ಟಿದ್ದಾಳೆ. ಸಂಧ್ಯಾಕಾಲ ಸೂರ್‍ಯನ ಹೊಂಬಣ್ಣದ ಕಿರಣಗಳು ಮಲೆನಾಡ ಹಸರು ಬಯಲಿನಮೇಲೆ ಬಿದ್ದು ಪೈರಿನ ಪಚ್ಚೆಯನ್ನು ಹೊನ್ನಾಗಿ ಮಾಡುವಾಗ ಅವಳು ಒಂದು ಬಂಡೆಯಮೇಲೆ ಕುಳಿತು ಲಾವಣಿಗಳನ್ನು ಹಾಡುತ್ತಿರುವಳು. ಇರುಳಲ್ಲಿ ಕತ್ತಲೆಯಂತಹ ಕರಿಯ ಸೀರೆಯನ್ನುಟ್ಟು ಕತ್ತಲೆಗಿಂತಲೂ ಕಪ್ಪಾದ ಮುಡಿಯಲ್ಲಿ ಒಂದೇ ಜಡೆಬಿಲ್ಲೆಯನ್ನು ಮಿಂಚು ಹುಳುವಿನಂತೆ ಹೊಳಿಸುತ್ತಾ, ಕಾಡಿನಲ್ಲಿ ಆಯ್ದ ಸುಮಗಳನ್ನು ಮಾಲೆ ಕಟ್ಟಿ ಮನೆಗೆ ತಂದು ತನ್ನ ಪ್ರೀತಿಯ ಹಸುವಿನ ಕೋಡಿಗೆ ಅದನ್ನು ಸುತ್ತುವಾಗ, ಅವಳೂ ನಿಶ್ಶಬ್ದವಾದ ಕರಿಯ ಬೆಡಗಿನ ಇರುಳಿನಂತೆಯೇ ತೋರುತ್ತಾಳೆ. ಮಲೆನಾಡಿನ ಲತೆ ಗಿಡಗಳ ನಡುವೆ ಅಲೆದಾಡುತ್ತಾ ದನಕರುಗಳೊಂದಿಗೆ ಮಾತನಾಡುತ್ತಾ, ಹಸುರು ಹುಲ್ಲಿನ ಮೇಲೆ ಮರದ ಶೀತಳವಾದ ನೆರಳಿನಲ್ಲಿ ಅವಳು ಅರ್ಧ ಒರಗಿ ಕುಳಿತಿರುವಾಗ ವನದೇವತೆಯಂತೆ ತೋರುತ್ತಾಳೆ. ಹೂವುಗಳಿಂದ ಕೂಡಿದ ಲತೆ"-

“ಸಾಕಯ್ಯ ಏನು ಕವಿಯಾಗಿಬಿಟ್ಟೆಯೆಲ್ಲ! ಯಾರೂ ಕಾಣದ ಮಲೆನಾಡ ಹುಡುಗಿಯೆ ನಿನ್ನವಳು.”

ತನ್ನ ವರ್ಣನೆಯಲ್ಲಿ ಈ ರೀತಿ ಮಧ್ಯೆ ವಿಘ್ನವುಂಟಾದುದರಿಂದ ನನ್ನ ಸ್ನೇಹಿತನಿಗೆ ಅಷ್ಟೇನೂ ಸಮಾಧಾನವಾಗಲಿಲ್ಲ. ಆದರೂ

“ಹೌದೊ ಕವಿಯಾಗಿಬಿಟ್ಟೆ. ಪ್ರೇಮವು ಎಲ್ಲರನ್ನೂ ಕವಿಗಳನ್ನು ಮಾಡುವುದು. ಇವಳು ನನ್ನಲ್ಲಿ ಪ್ರಸನ್ನಳಾದಮೇಲೆ ಕವಿತೆಯು ಪ್ರಸನ್ನಳಾಗುವುದೇನು ಹೆಚ್ಚು?" ಎಂದನು. ನಾನು “ಇದೆಲ್ಲಾ ಸರಿಕಣೋ. ಅವಳಿಗೆ