ಈ ಪುಟವನ್ನು ಪ್ರಕಟಿಸಲಾಗಿದೆ
ಹಳ್ಳಿಯ ಚಿತ್ರಗಳು

ನಡೆದ ವಿಷಯವೊಂದನ್ನು ಹೇಳಿಬಿಡುತ್ತೇನೆ. ಮಂಡ್ಯವನ್ನು ಬಿಟ್ಟಕೂಡಲೆ ಕ್ಲೀನರ್ ಮಹಾಶಯನು, ಬಸ್ಸನ್ನು ತಾನೇ ನಡಿಸಲು ಅಸಾಧಾರಣವಾದ ಆತುರತೆಯನ್ನು ತೋರಿಸಿದನು. ಡೈವರನು ಬೇಡ ಬೇಡವೆಂದು ಹೇಳುತ್ತಾ ಬನ್ನೂರಿಗೆ ಸುಮಾರು ೪ ಮೈಲು ಇರುವವರೆಗೆ ತಾನೇ ನಡಿಸಿದನು. ಆದರೆ ಮನುಷ್ಯ ಪ್ರಾಣಿಯಲ್ಲವೆ? ಕ್ಲೀನರು ಪದೇ ಪದೇ ಪ್ರಾರ್ಥಿಸುತ್ತಿರುವಾಗ, ಹೇಗೆ ತಾನೆ ಇಲ್ಲವೆಂದಾನು? ಮೋಟಾರು ಬಸ್ಸನ್ನು ನಡೆಸಲು ಅವನನ್ನು ಕೂರಿಸಿ, ತಾನು ಮಗ್ಗುಲಲ್ಲಿ ಸಿಗರೇಟನ್ನು ಸೇದುತ್ತಾ ಕಣ್ಣನ್ನು ಅರ್ಧ ಮುಚ್ಚಿಕೊಂಡು, ಅದರ ಹೊಗೆಯು ಸುರುಳಿ ಸುರುಳಿಯಾಗಿ ಮೇಲಕ್ಕೆ ಹೋಗುವುದನ್ನು ನೋಡುತ್ತಾ ವಿರಾಮವಾಗಿ ಕುಳಿತುಬಿಟ್ಟನು. ನಾನು ಊಹಿಸುತ್ತಿದ್ದ ಅಪಾಯವು ಬಂದೇಬಂದಿತು. ಮೊದಲೇ ಇದ್ದ ನನ್ನ ನಡುಕವು ಮತ್ತಷ್ಟು ಹೆಚ್ಚಾಯಿತು. ಹಿಂದೊಂದು ಸಲ ಡೈವರನ ಕೃಪೆಗೆ ಪಾತ್ರನಾದ ಕ್ಲೀನರ್ ಮಹಾಶಯನ ಕೈಯಲ್ಲಿ ಪ್ರಾಣವನ್ನು ಒಪ್ಪಿಸಿ, ನರಕಯಾತನೆಯನ್ನು ಅನುಭವಿಸಿದ್ದೆ. ಡೈವರುಗಳು ತಮ್ಮ ಪ್ರಯಾಣಿಕರ ಜವಾಬ್ದಾರಿಯನ್ನು ಕ್ಲೀನರು ಮೋಟಾರ್‌ ನಡೆಸುವುದನ್ನು ಕಲಿಯುವ ಆಶೆಗೆ ಬಲಿಕೊಡುತ್ತಿದ್ದುದನ್ನು ನಾನು ನೋಡಿದುದು ಅದೇ ಮೊದಲನೆಯ ಸಲವಾಗಿರಲಿಲ್ಲ. ಡೈವರನನ್ನು ಕುರಿತು "ಸ್ವಲ್ಪ ಗಾಡಿ ನಿಲ್ಲಿಸು" ಎಂದೆ. ಅವನು "ನೀವು ಇಳಿಯುವುದು ತಲಕಾಡಿನಲ್ಲಿ ಅಲ್ಲವೇ? ಇನ್ನೂ ೧೫ ಮೈಲು ಇದೆಯೆಲ್ಲಾ” ಎಂದ. ನಾನು ಮತ್ತೆ “ನಿಲ್ಲಿಸು” ಎಂದೆ. 'ಜರ್‍ರ ಖಡೆ ಕರೊ' ಎಂಬುದಾಗಿ ಕ್ಲೀನರಿಗೆ "ಆರ್ಡರ್" ಮಾಡಿಬಿಟ್ಟ. ತಾನು ಕಲಿಯುವುದಕ್ಕೆ ಪ್ರಾರಂಭಿಸಿದ ಕೂಡಲೇ ನಿಲ್ಲಿಸು ಅಂದುಬಿಟ್ಟನಲ್ಲಾ ಎಂದು ಕ್ಲೀನರನು ಸ್ವಲ್ಪ ಕೋಪದಿಂದಲೇ ನನ್ನ ಮೇಲೆ ಕಣ್ಣು ಬಿಟ್ಟ. ಪ್ರಾಣ ಭಯವು ನನ್ನನ್ನು ಪೂರ್ಣವಾಗಿ ಆಳುತ್ತಿದ್ದುದರಿಂದ, ನಾನು ಅವನ ಕಣ್ಣಿನ ಕೆಂಡಕ್ಕೆ ಲಕ್ಷ್ಯಮಾಡಲಿಲ್ಲ. ಎರಡು ಫರ್ಲಾಂಗ್ ಮುಂದೆ ಗಾಡಿಯನ್ನು ನಿಲ್ಲಿಸಿದ. ನಾನು ಇಳಿದು ಗಾಡಿಯ ಮುಂದೆ ನಿಂತುಕೊಂಡೆ. ಎಲ್ಲರೂ ಆಶ್ಚರ್‍ಯದಿಂದ ನನ್ನ ಕಡೆಯೇ ನೋಡಿದರು. ಡೈವರನನ್ನು ಕುರಿತು “ಗಾಡಿಯನ್ನು ನೀನು ನಡೆಸು. ಇಲ್ಲದಿದ್ದರೆ ನಾನು ಹತ್ತುವುದಿಲ್ಲ. ನಿನಗೆ ಮುಂದಕ್ಕೆ ಹೋಗಲು ಅವಕಾಶ