ಈ ಪುಟವನ್ನು ಪ್ರಕಟಿಸಲಾಗಿದೆ
ನಾನು ರತ್ನಳ ಮದುವೆಗೆ ಹೋದುದು

ಹೇಳಿದೆನಷ್ಟೆ. ಅಲ್ಲಿ ನಮ್ಮ ಮತ್ತೊಬ್ಬ ಗೆಳೆಯರಿದ್ದರು. ಆ ರಾತ್ರೆಯನ್ನು ಅವರ ಮನೆಯಲ್ಲಿ ಕಳೆಯುವುದು ಅನಿವಾರ್ಯವಾಯಿತು. ಹೊನ್ನ ಹಳ್ಳಿಯು ಅಲ್ಲಿಂದ ೩ ಮೈಲು ಎಂದು ಹೇಳಿದೆನಲ್ಲಾ, ಆ ಮೂರು ಮೈಲಿಯನ್ನು ಬೆಳಿಗ್ಗೆ ನಡೆದು, ಅಲ್ಲಿ ನದಿಯನ್ನು ದಾಟಬೇಕೆಂದು ಯೋಚಿಸಿಕೊಂಡೆ. ಬಹಳ ದಿವಸಗಳ ಮೇಲೆ ಹೋದ ಸ್ನೇಹಿತನಾದುದರಿಂದ ನನ್ನ ಗೆಳೆಯನು ನನ್ನನ್ನು ಬಹಳ ಚೆನ್ನಾಗಿ ಆದರಿಸಿದನು. ಪ್ರಾತಃಕಾಲ ತಾನೂ ಹೊನ್ನ ಹಳ್ಳಿಗೆ ಮದುವೆಗೆ ಬರುವುದಾಗಿ ಹೇಳಿದನು. ಆದರೆ ಆ ಆನಂದದಲ್ಲಿಯೂ ಸ್ವಲ್ಪ ಕಹಿಯು ಇದ್ದೇ ಇದ್ದಿತು. '

ನಮ್ಮ ಗೆಳೆಯನ ಅತ್ತೆಯವರು ಬಹಳ ಮಡಿ. ಮೈಲಿಗೆ ವಸ್ತುಗಳ ಮೇಲೆ ಬೀಸಿದ ಗಾಳಿ ಅವರಿಗೆ ಬೀಸಿದರೂ ಸಾಕು; ಕೂಡಲೆ ಸ್ನಾನಮಾಡಬೇಕು. ಮಾತನಾಡಿದುದಕ್ಕೆಲ್ಲ ಸ್ನಾನ. ಮುದುಕರಾದರೂ ದಿವಸಕ್ಕೆ ೮-೧೦ ಸಲ ತಣ್ಣೀರಿನಲ್ಲಿ ಮುಳುಗುತ್ತಾರೆ. ನನ್ನನ್ನು ಕಂಡ ಕೂಡಲೆ ಅವರು ನಡುಗಿದರು. ನಾನು ಇಂಗ್ಲೀಷ್ ಕಲಿತು, ಬೆಂಗಳೂರಿನಲ್ಲಿ ಜೀವಿಸುತ್ತಾ, ನಲ್ಲಿಯ ನೀರನ್ನು ಕುಡಿಯುತ್ತಿರುವೆನಾದುದರಿಂದ, ನನಗೆ ನರಕದಲ್ಲಿ ಶಾಶ್ವತವಾದ ಸ್ಥಳವಿರುವುದೆಂದು ಅವರು ತೀರ್ಮಾನಿಸಿದ್ದರು. ನಾನು ಹೋದಕೂಡಲೇ, ಎಲ್ಲಿ ಸ್ನಾನ ಮಾಡುವ ಪಾತ್ರೆಗಳನ್ನು ಮುಟ್ಟಿಬಿಡುತ್ತಾನೋ ಎಂಬ ಗಾಬರಿಯಿಂದ, ನಾನು ಕೇಳುವುದಕ್ಕೆ ಮುಂಚೆಯೇ ಬೆಳ್ಳಿಯ ಚೊಂಬಿನಲ್ಲಿ ಕಾಲು ತೊಳೆಯಲು ನೀರನ್ನು ತಂದಿಟ್ಟರು. ಒಳಕ್ಕೆ ಹೋದಾಗ ಎಲ್ಲಿ ಕೊಟ್ಟಿಗೆಗೆ ಹೋಗಿಬಿಡುತ್ತಾನೆಯೋ ಎಂದು ನನ್ನ ಹಿಂದೆಯೇ ಬಂದರು. ಇದನ್ನೆಲ್ಲಾ ನೋಡಿ ನನಗೆ ಬಹಳ ನಗು ಬಂದಿತು. ನನ್ನ ಸ್ನೇಹಿತನೂ ಅವನ ಹೆಂಡತಿಯೂ ಉಪಚಾರ ಹೇಳಿದರು.

ಆ ದಿವಸ ಸಾಯಂಕಾಲ ನಡೆದ ಮತ್ತೊಂದು ವಿಷಯವನ್ನು ಇಲ್ಲಿ ಹೇಳಬೇಕಾಗಿದೆ. ನಾನೂ ನನ್ನ ಸ್ನೇಹಿತನ ಮನೆಯೊಳಗೆ ಕುಳಿತಿದ್ದೆವು. ಹೊರಗೆ ಬಿರುಗಾಳಿ ಬೀಸುತ್ತಿದ್ದಿತು. ಗಾಡಾಂಧಕಾರ, ಅವರ ಮನೆಯಿಂದ ೪ ಮಾರು ದೂರದಲ್ಲಿ ಒಂದು ತೋಪಿದೆ. ಆ ತೋಪಿನ ಆಚೆ ರಸ್ತೆ, ರಸ್ತೆಯ ಮಗ್ಗುಲಲ್ಲಿ ನಮ್ಮ ಸ್ನೇಹಿತನ ಜೀತಗಾರನ ಮನೆ. ಆ ಜೀತಗಾರನು ಪ್ರತಿದಿನವೂ ಕತ್ತಲೆಯಾಗುವುದಕ್ಕೆ ಮುಂಚೆಯೇ ತನ್ನ ಮನೆ