ಹೊಡೆದಂತಾಯಿತು. ನನ್ನ ಹೆಮ್ಮೆ ಇಳಿಯಿತು. "ಹೇಗಾದರೂ ಮುಗಿದರೆ ಸಾಕು" ಎಂದು ಯೋಚಿಸಿ, "ಅರ್ಜುನನು ಬಿಲ್ಲೇರಿಸಿದ ಸ್ಥಳವನ್ನು ಓದು" ಎಂದೆ. ಅಂತೂ ಆಯಿತು. ಇನ್ನು ಬದುಕಿರುವವರೆಗೆ ಪ್ರಾಣ ಹೋದರೂ ಸರಿಯೆ. ಪುರಾಣವನ್ನು ಮಾತ್ರ ಹೇಳುವುದಿಲ್ಲವೆಂದು ಶಪಥ ಮಾಡಿಕೊಂಡೆ. ಮಲಗುವ ವೇಳೆಗೆ ರಾತ್ರಿ ೧ ಗಂಟೆ ಆಯಿತು.
ಬೆಳಗಾಯಿತು. ನನ್ನ ಸ್ನೇಹಿತ, ಗೃಹಸ್ಥ, ನಾಳೆ ಜೊತೆಯಲ್ಲಿ ಬರುತ್ತೇನೆ ಎಂದು ಹೇಳಿದ್ದವನು ಮುಂಜಾನೆ ಎದ್ದು ಕಬ್ಬಿನ ಗದ್ದೆಗೆ ಹೋಗಿ “ಸಾಯಂಕಾಲ ಬರುತ್ತೇನೆ. ಈಗ ಕೆಲಸವಿದೆ” ಎಂಬುದಾಗಿ ಹೇಳಿ ಕಳುಹಿಸಿಬಿಟ್ಟ. ನಾವು ಮೂರು ಮೈಲು ನಡೆದುಕೊಂಡು ಹೋಗಿ ನದಿಯನ್ನು ದಾಟಬೇಕಾಗಿದ್ದಿತೆಂದು ಮೊದಲೇ ಹೇಳಿದೆನಲ್ಲ. ಹೊರಟೆವು. ಆ ವೇಳೆಗೆ ಸರಿಯಾಗಿ ನಮ್ಮ ಭಾವನವರ ಆಳು ಬಂದ. ನಮ್ಮ ಸ್ನೇಹಿತನ ಅತ್ತೆಯು ಅವನನ್ನು ಕುರಿತು "ಎಲೊ ನಿಮ್ಮ ಒಡೆಯನೋರ ಭಾಮೈದ ಬಂದಿದ್ದಾರೆ. ಗಾಡಿ ಕಟ್ಟಿಕೊಂಡು ಹೊಳೆಯವರಿಗೆ ಬಿಟ್ಟು ಬಾ" ಎಂದರು. ನಮ್ಮ ಭಾವನವರು ಎದುರಿಗೆ ಇದ್ದಿದ್ದರೆ, ಆ ರೀತಿ ಹೇಳಲು ಅವರಾರಿಗೂ ಧೈರ್‍ಯವುಂಟಾಗುತ್ತಿರಲಿಲ್ಲ. ಯಾತಕ್ಕೆಂದರೆ ನಮ್ಮ ಭಾವನವರಿಗೆ ಎತ್ತು ಎಂದರೆ ಪ್ರಾಣ, ಪ್ರಾಣವನ್ನಾದರೂ ಕೊಡುತ್ತಾರೆಯೇ ಹೊರತು, ಕೆಲಸ ತಪ್ಪಿಸಿ ಅವರು ಎತ್ತನ್ನು ಕಳುಹಿಸುವವರಲ್ಲ. ಆದುದರಿಂದ ನಾನು "ಎತ್ತೂ ಬೇಡ, ಗಾಡಿಯೂ ಬೇಡ, ನಡೆದುಕೊಂಡೇ ಹೋಗುತ್ತೇನೆ” ಎಂದೆ. ಇನ್ನಿಬ್ಬರು ನೆಂಟರು ಇದ್ದರಲ್ಲಾ, ಅವರಲ್ಲಿ ಒಬ್ಬರು ಮುದುಕರು. ಅವರು “ಬರಲಯ್ಯ ಗಾಡಿ, ನಿಮ್ಮಪ್ಪನ ಗಂಟೇನ್ಲೋಗೋದು, ಕೂತ್ಕಂಡೋಗೋಣ" ಎಂದರು. ದಾಕ್ಷಿಣ್ಯ; ಸುಮ್ಮನಾದೆ.
ಗಾಡಿಯನ್ನು ಕೂಡಿಕೊಂಡು ಅವನು ಬರುವ ವೇಳೆಗೆ ಸುಮಾರು ೮ ಘಂಟೆಯಾಯಿತು. ದೊಡ್ಡ ಎತ್ತುಗಳನ್ನು ಉಳುವುದಕ್ಕೆ ಹೂಡಿದ್ದುದರಿಂದ ಗಾಡಿಗೆ ಒಂದು ಜೊತೆ ಹೋರಿಗಳನ್ನು ಕಟ್ಟಿದ್ದ. ಅವುಗಳಿಗೆ ಗಾಡಿ ಎಳೆದು ಅನುಭವವಿರಲಿಲ್ಲ. ನಾವು ಹೋಗುತ್ತಿದ್ದ ರಸ್ತೆಯೊ-ಅದು ರಸ್ತೆಯೇ ಅಲ್ಲ-ಬೋರೆಯ ಮೇಲೂ ಹೊಲದ ಮೇಲೂ ಸವೆದುಹೋಗಿದ್ದ