ಈ ಪುಟವನ್ನು ಪ್ರಕಟಿಸಲಾಗಿದೆ
೧೬
ಹಳ್ಳಿಯ ಚಿತ್ರಗಳು

ಗಳು ನಮಗಿಂತ ಮುಂಚಿತವಾಗಿಯೇ ನೋಡಿಬಿಟ್ಟವು. ಆ ಎತ್ತುಗಳಿಗೆ ಕೆಂಪು ಶಾಲನ್ನು ಕಂಡರೆ ಮರಣ ಭಯ. ಕೇಳಬೇಕೆ? ನಾಗಾಲೋಟದಲ್ಲಿ ಓಡಲು ಪ್ರಾರಂಭಿಸಿಬಿಟ್ಟವು. ಪಾಪ; ನಮ್ಮ ಮುದುಕರಿಗೆ ಗಾಡಿಯಿಂದ ಧುಮುಕುವುದಕ್ಕೆ ಕೂಡ ಅವಕಾಶವಾಗಲಿಲ್ಲ. ಆಳು ಹಗ್ಗವನ್ನು ಎಷ್ಟು ಜಗ್ಗಿ ಹಿಡಿದರೂ ಎತ್ತುಗಳು ಸ್ವಾಧೀನಕ್ಕೆ ಬರಲಿಲ್ಲ. ನಮ್ಮ ಮುದುಕರು ನಾರಾಯಣ, ಕೃಷ್ಣ, ರಾಮಚಂದ್ರ ಎಂದು ಪದೇ ಪದೇ ಹೇಳತೊಡಗಿದರು. ಕೃಷ್ಣನಾಗಲಿ, ರಾಮಚಂದ್ರನಾಗಲಿ ಎತ್ತಿನ ವೇಗವನ್ನು ತಡೆಯಲಿಲ್ಲ. ಗಾಡಿಯು ಇನ್ನೂ ೪ ಉರುಳು ಉರುಳುವುದರೊಳಗಾಗಿ, ನಾವೆಲ್ಲ ನೆಲದ ಮೇಲಿದ್ದೆವು. ಒಂದು ಎತ್ತು, ಹಗ್ಗವನ್ನು ಕಿತ್ತುಕೊಂಡು ಓಡಿ ಹೋಯಿತು; ಮತ್ತೊಂದು ಗಾಡಿಯ ಬಳಿ ನಿಂತಿತು. ಗಾಡಿಯು ಮಗುಚಿಕೊಂಡಿತು. ದೇವರ ದಯದಿಂದ ಯಾರಿಗೂ ಏನೂ ಪೆಟ್ಟಾಗಲಿಲ್ಲ. ನಾವೆಲ್ಲ ಸೇರಿ ದಾರಿಯಲ್ಲಿ ಹೋಗುತ್ತಿದ್ದ ೨-೩ ಜನರ ಸಹಾಯದಿಂದ ಗಾಡಿಯನ್ನು ಮೇಲಕ್ಕೆ ಎತ್ತಿ, ಓಡಿಹೋಗಿದ್ದ ಎತ್ತನ್ನು ಹಿಡಿದು ತಂದು ಕಟ್ಟಿ ಗಾಡಿಯನ್ನು ಹಿಂದಕ್ಕೆ ಹೊಡೆದು ಕಳುಹಿಸಿದೆವು.

ಮತ್ತೊಂದು ವಿಷಯವನ್ನು ಹೇಳುವದನ್ನ ಮರತೆ. ನಿಮಗೆ ಆಶ್ಚರ್ಯವಾಗಬಹುದು. ನನ್ನ ಜೊತೆಯಲ್ಲಿದ್ದರಲ್ಲಾ ಮುದುಕರು, ಅವರು ಇದುವರೆಗೆ ಹರಿಗೋಲನ್ನೇ ನೋಡಿರಲಿಲ್ಲ. ಹಳ್ಳಿಯಲ್ಲಿದ್ದುಕೊಂಡು ಹರಿಗೋಲನ್ನೇ ನೋಡಿಲ್ಲವೆಂದರೆ ನಿಮಗೆ ಆಶ್ಚರ್‍ಯವಾಗದೆ ಮತ್ತೇನು ?

"ಇದೇನು ಸ್ವಾಮಿ, ಹರಿಗೋಲನ್ನೇ ನೋಡಿಲ್ಲವೆ. ವಯಸ್ಸು ಆಗಲೆ ೬೦ ಆಗಿದೆ. ನೀವೇನು ನ್ಯೂಯಾರ್ಕ್ ಅಥವ ಲಂಡನ್ ನಗರದಲ್ಲಿ ವಾಸಮಾಡಿದವರೊ" ಎಂದೆ. ಮುದುಕರು "ನ್ಯೂಯಾರ್ಕು ಕಾಣೆ, ಲಂಡನ್ನೂ ಕಾಣೆ. ನಮ್ಮ ಊರು ಬಿಟ್ಟು ನಾನು ಇದುವರೆಗೆ ಹೊರಕ್ಕೆ ಹೊರಟವನಲ್ಲ" ಎಂದರು. ಸ್ವಲ್ಪ ಹೊತ್ತಿನ ಮೇಲೆ "ಏನಯ್ಯ ಹರಿಗೋಲು ಹೇಗಿದೆ? ಅದರಲ್ಲಿ ಕುಳಿತರೆ ಸರಿಯಾಗಿ ಆಚೆ ದಡಕ್ಕೆ ತಲುಪುತ್ತೇವೆಯೆ? ನೀರಲ್ಲಿ ದುರ್ಮರಣವುಂಟಾಗಿ ಗತಿಯಿಲ್ಲದೆ ಅಂತರ ಪಿಶಾಚಿಯಾಗಿ ತಿರುಗಬೇಕಾದೀತು” ಎಂದರು. ನಾನು "ಏನೂ ಭಯವಿಲ್ಲ ಬನ್ನಿ" ಎಂದೆ. ಹೊಳೆಯ ದಡಕ್ಕೆ ಹೋದೆವು.