ನೋಡಿ” ಎಂದು ಬೈದನು. ಹರಿಗೋಲಿನಲ್ಲಿರುವಾಗ ಅಂಬಿಗನ ಹತ್ತಿರ, ಕ್ಷೌರ ಮಾಡುತ್ತಿರುವಾಗ ಹಜಾಮನ ಹತ್ತಿರ, ಕೇಸು ನಡೆಯುತ್ತಿರುವಾಗ ಲಾಯರ ಹತ್ತಿರ ವಿರೋಧವನ್ನು ಕಟ್ಟಿಕೊಳ್ಳುವುದು ತರವಲ್ಲ. ಆದುದುರಿಂದ ನಾವಾರೂ ಮಾತನಾಡಲಿಲ್ಲ.
ಭಯಂಕರವಾದ ಬಿರುಗಾಳಿ ಎದ್ದಿತು. ಕರಿಯ ಮೋಡವು ಆಕಾಶವನ್ನೂ ಭೂಮಿಯನ್ನೂ ಒಂದುಮಾಡಿ, ಮಧ್ಯಾಹ್ನವೇ ರಾತ್ರೆಯಂತೆ ತೋರಿತು. ಮೋಡಗಳು ಕ್ರೂರವಾದ ಧ್ವನಿಯಿಂದ ಗುಡುಗುತ್ತಿದ್ದುವು. ಈಶಾನ್ಯ ದಿಕ್ಕಿನಲ್ಲಿ ಮಿಂಚು ಸಹಸ್ರನಾಲಗೆಯ ಹಾವುಗಳಂತೆ ಮೋಡವನ್ನು ಕಚ್ಚುತ್ತಿದ್ದಿತು. ಸಿಡಿಲು ಪ್ರಳಯ ಕಾಲದ ಸಿಡಿಲಿಗೆಣೆಯಾಗಿದ್ದಿತು. ಮೃತ್ಯುವು ಅಸಂಖ್ಯಾತವಾದ ಬಾಯಿಗಳಿಂದ ನಮ್ಮನ್ನು ನುಂಗುವುದಕ್ಕೆ ಬರುತ್ತಿರುವಂತೆ ತೋರಿತು. ನಮ್ಮ ಹರಿಗೋಲು ಅಲೆಗಳಿಗೂ ಸುಳಿಗಳಿಗೂ ಸಿಕ್ಕಿ ಬುಗರಿಯಂತೆ ಗಿರಗಿರನೆ ತಿರುಗುತ್ತಿದ್ದಿತು. ಸುತ್ತಲೂ ಆಕಾಶವು ಭರಣಿಯ ಮುಚ್ಚಲದಂತೆ ನಮ್ಮ ಮೇಲೆ ಕವಿದುಕೊಂಡು, ನಾವು ನದಿಯ ಮೇಲೆ ಸೆರೆಯಾಳುಗಳಾದಂತೆ ತೋರುತ್ತಿದ್ದಿತು. ಮಂತ್ರದಿಂದ ಮುಗ್ಧರಾದವರಂತೆ ಅಂಬಿಗರು ಹುಟ್ಟಿಯನ್ನು ಹರಿಗೋಲಿನಲ್ಲಿಟ್ಟು ನಿರಾಶರಾಗಿ ನಿಂತು ಬಿಟ್ಟರು. ಹರಿಗೋಲು ವಾಯುವೇಗದಿಂದ ಬಂಡೆಯ ಕಡೆಗೆ ಹೊರಟಿತು. ನಾವು ಅಪಾಯದಿಂದ ದೂರವಾಗಿದ್ದಿದ್ದರೆ ಪ್ರಕೃತಿಯ ಅದೊಂದು ಬೆಡಗಿನ ಕ್ರೂರ ಮುದ್ರೆಯ ಆ ಆನಂದವನ್ನು ನಾವು ಅನುಭವಿಸಬಹುದಾಗಿದ್ದಿತು. ಕಣ್ಣಿಗೆ ಕಾಣುವವರೆಗೆ ಕೆಂಪಾದ ನೀರು; ನೋಡುವುದಕ್ಕೆ ಅವ್ಯವಸ್ಥಿತವಾಗಿ ತೋರುತ್ತಿದ್ದರೂ ಕ್ರಮವರಿತು ನೆಗೆಯುತ್ತಿದ್ದ ಅಲೆಗಳ ಒಟ್ಟು ಗರ್ಜನೆಯಿಂದ ಹೊರಡುತ್ತಿದ್ದ ಒಂದು ಬಗೆಯ ಗಾನ, ರಾಶಿರಾಶಿಯಾಗಿ ತೇಲಿಹೋಗುತ್ತಿದ್ದ ಬಿಳಿಯ ನೊರೆಯ ಗುಂಪುಗಳು, ಕಣ್ಣಿಗೆ ತೋರುವವರೆಗೆ ಒಂದೇ ಸಮನಾಗಿ ಹರಿಯುತ್ತಾ ಸಮುದ್ರದ ಜ್ಞಾಪಕವನ್ನು ತರುತ್ತಿದ್ದ ನದಿಯ ನೀರಿನ ರಾಶಿ. ಇವುಗಳೆಲ್ಲ ಉಳಿದ ವೇಳೆಯಲ್ಲಾದರೆ ನಮಗೆ ಅತ್ಯಂತ ಆನಂದವನ್ನೇ ಕೊಡುತ್ತಿದ್ದುವು. ಆದರೆ ಆಗ ಅವುಗಳನ್ನು ಕುರಿತು ಯೋಚಿಸುವುದು, ಮರಣ ದಂಡನೆಗೆ ಗುರಿಮಾಡಲ್ಪಟ್ಟವನು ತನ್ನ ಆಯುಷ್ಯದ ವಿಷಯದಲ್ಲಿ ಜ್ಯೋತಿಷ್ಯವನ್ನು ಕೇಳಿ