ಈ ಪುಟವನ್ನು ಪ್ರಕಟಿಸಲಾಗಿದೆ
೨೨
ಹಳ್ಳಿಯ ಚಿತ್ರಗಳು

ತಾಯಿಯ ದಯ” ಎಂದನು. ವಿದ್ಯುತ್ ದೇಹದಲ್ಲಿ ಪ್ರವಹಿಸಿದಂತೆ ಅಂಬಿಗರೆಲ್ಲರೂ ಹುಟ್ಟೆಗಳನ್ನು ಕೈಗೆ ತೆಗೆದುಕೊಂಡರು. ಮರವು ಯಾವ ನೇರದಲ್ಲಿ ಬರುವುದೆಂಬುದನ್ನು ಹೇಳಲು ಸಾಧ್ಯವಿರಲಿಲ್ಲ. ಪ್ರವಾಹದ ವೇಗದಿಂದ ಅದು ಒಂದು ಸಲ ಈ ಕಡೆಗೂ ಮತ್ತೊಂದು ಸಲ ಆ ಕಡೆಗೂ ತಿರುಗುತ್ತಿತ್ತು. ಅಂಬಿಗರು ಹರಿಗೋಲನ್ನು ಒಂದು ಕಡೆಗೆ ನಡೆಸಿದರು. ಮರವು ನಮ್ಮ ಕಡೆಗೆ ಬರುತ್ತಿರುವುದನ್ನು ಕಂಡು ನಾವೆಲ್ಲರೂ ಎದುರಿಗೆ ಬರುತ್ತಿರುವ ಮೃತ್ಯುವನ್ನು ಎದುರುಗೊಳ್ಳಲಾರದೆ ಕಣ್ಣನ್ನು ಮುಚ್ಚಿದೆವು. ಮರದ ಒಂದು ಕೊಂಬೆಯ ತುದಿಯು ಹರಿಗೋಲಿಗೆ ತಗುಲಿತು. ಒಮ್ಮಿಂದೊಮ್ಮೆ ಹರಿಗೋಲು ಗಿರ್‍ರೆಂದು ತಿರುಗಿತು. ನಾವೆಲ್ಲರೂ ಹರಿಗೋಲಿನಲ್ಲಿ ಸೋರೆಯ ಬುರುಡೆಗಳಂತೆ ಉರುಳಾಡಿದೆವು. ಅಂಬಿಗರು "ಕಾವೇರಿ ತಾಯಿಯು ಈ ಸಲ ಕಾಪಾಡಿದಳು" ಎಂದರು. ಸಾಯುವುದಕ್ಕಾಗಿ ಕಣ್ಣನ್ನು ಮುಚ್ಚಿದ್ದ ನಾನು, ಯಮಲೋಕದಿಂದ ಹಿಂದಿರುಗಿ ಬಂದವನಂತೆ ಕಣ್ಣನ್ನು ಬಿಟ್ಟಿ. ದೂರದಲ್ಲಿ ಮರವು ದೊಡ್ಡ ಭೂತದಂತೆ ತೇಲಿಹೋಗುತ್ತಿದ್ದಿತು.

ಈ ಅಪಾಯದಿಂದ ತಪ್ಪಿಸಿಕೊಂಡುದರೊಡನೆ, ಅಂಬಿಗರಿಗೆ ಮತ್ತೆ ಜೀವದ ಆಸೆಯುಂಟಾಯಿತು. ಅವರು ಮನಸ್ಸು ಮಾಡಿ ಹುಟ್ಟೆ ಹೊಡೆದರು. ನೀರಿನಲ್ಲಿ ಮುಚ್ಚಿಹೋಗಿದ್ದ ಗಿಡಗಳ ಮೇಲೆ ಕುಣಿಯುತ್ತಾ ಹರಿಗೋಲು ದಡವನ್ನು ಸೇರಿತು. ದಡವನ್ನು ಎಂದರೆ, ಎದುರು ದಡವನ್ನಲ್ಲ. ನಾವು ಯಾವ ದಡದಿಂದ ಹೊರಟಿದ್ದೆವೋ ಆ ದಡವನ್ನು, ಭೂಮಿಯು ಗುಂಡಾಗಿದೆ ಎಂಬ ಮಾತು ಅನುಭವಕ್ಕೆ ಬಂದಂತಾಯಿತು.

ಹರಿಗೋಲನ್ನು ಮತ್ತೆ ಬಿಡೆಂದು ಅಂಬಿಗರಿಗೆ ಹೇಳಲು ನಮಗಾರಿಗೂ ಧೈರವಿರಲಿಲ್ಲ. ಸಾಯಂಕಾಲ ೬ ಗಂಟೆಯ ವೇಳೆಗೆ ಆಕಾಶವು ನಿರ್ಮಲವಾಯಿತು. ಮೋಡಗಳೆಲ್ಲ ಚೆದುರಿಹೋದುವು. ಭೂಮಿಯು ಬೆಳದಿಂಗಳ ವಸನವನ್ನು ತೊಟ್ಟಳು. ನದಿಯು ಶಾಂತವಾಯಿತು. ಮಧ್ಯಾಹ್ನ ಆ ನದಿಯನ್ನು ಕಂಡ ನಾವು ಅದೂ ಇದೂ ಎರಡೂ ಒಂದೇ ಎಂದು ನಂಬಲಾರದೆ ಹೋದೆವು. ಈ ಸೌಮ್ಯ, ಆ ರೌದ್ರ; ಈ ಶಾಂತತೆ, ಆ ಘರ್ಜನೆ; ಸ್ವರ್ಗಲೋಕದ ದೇವಿಯಂತೆ ನಡೆವ ಈ ಗಂಭೀರ