ಈ ಪುಟವನ್ನು ಪ್ರಕಟಿಸಲಾಗಿದೆ

ನಾವು ಮಾಡಿದ ಒಂದು ಯಾತ್ರೆ


ನಮ್ಮ ಚಿಕ್ಕಪ್ಪನ ಮಗ ರಾಜು, ಆ ಹುಡುಗಿಯನ್ನು ನೋಡಿದ ಕೂಡಲೇ, ಮಾವಿನ ಹಣ್ಣಿಗಾಗಿ ಬಾಯಿ ಬಿಡುವ ಹುಡುಗನಂತೆ ಬಾಯಿ ಬಿಡುತ್ತಿದ್ದ. ಆದರೆ ಹುಡುಗಿಯರಿಗೆ ಮದುವೆಯ ವಿಷಯ ಹೇಳಿದರೆ ಹೇಗೆ ನಾಚಿಕೆಯೋ, ಹಾಗೆಯೇ ತನ್ನ ಮದುವೆ ವಿಚಾರ ಹೇಳಿದರೆ ರಾಜುಗೆ ನಾಚಿಕೆ, ಮದುವೆ ಗೊತ್ತಾದ ಮೇಲೂ ಅವನು ಒಂದು ದಿವಸ ನನ್ನೊಂದಿಗೆ

“ಈ ಮದುವೆಯಿಂದ ತಪ್ಪಿಸಿಕೊಳ್ಳೋದು ಹ್ಯಾಗೆ? ನಾನು ಬೇಡವೆಂದರೂ ನಮ್ಮ ತಂದೆಯವರು ಗೊತ್ತುಮಾಡಿಬಿಟ್ಟಿದ್ದಾರೆ. ದೊಡ್ಡವರ ಮಾತನ್ನು ಸುಲಭವಾಗಿ ಮೀರುವುದಕ್ಕೆ ಆಗುವುದಿಲ್ಲ" ಎಂದ.

ನಾನು “ಹಾಗಾದರೆ ಮದುವೆಯ ಮೊದಲು ರಾತ್ರಿ ಮೈಸೂರಿಗೆ ಎದ್ದುಬಿಡು" ಎಂದೆ. “ಹಾಗೆಯೇ ಆಗಲಿ” ಎಂದ.

ಆದರೆ ಹಣ್ಣಿಗಾಗಿ ಹಲ್ಲು ಬಿಡುತ್ತಿರುವ ಹುಡುಗ, ಕೈಗೆ ಸಿಕ್ಕುತ್ತಿರುವ ಹಣ್ಣನ್ನು ಬಿಟ್ಟುಹೋದುದನ್ನು ಯಾರಾದರೂ ಕಂಡಿದ್ದಾರೆಯೆ? ನಾನೂ ನೋಡಲಿಲ್ಲ.

ಹಾಸನದಿಂದ ೮ ಮೈಲು ದೂರದಲ್ಲಿರುವ ಶಿವಳ್ಳಿಯಲ್ಲಿ ಅವನ ಮದುವೆ ನಡೆಯಬೇಕೆಂದು ಗೊತ್ತಾಗಿತ್ತು. ಮೇಲುಕೋಟೆಯಿಂದ ನನ್ನ ಗೆಳೆಯ ಗುಂಡುವೂ ನಮ್ಮೂರಿಗೆ ಬಂದ. ಇಬ್ಬರೂ ಶಿವಳ್ಳಿಗೆ ಹೊರಟೆವು. ಮದುವೆಯ ದಿವಸವೇ ಅಲ್ಲಿಗೆ ಹೋದೆವು. ಧಾರೆ ಆಯಿತು.

ಮದುವೆಯ ಮನೆಯಲ್ಲಿ ವರನಿಗೆ ವಧುವಿನ ಜ್ಞಾನ; ವಧುವಿಗೆ ವರನ ಜ್ಞಾನ, ನಮಗೆ ಮದುವೆಯ ಊಟದ ಹೊರತು ಮತ್ತಾವುದರ ಕಡೆಗೂ ಲಕ್ಷ್ಯವಿರಲಿಲ್ಲ. ನನ್ನ ಹೆಂಡತಿಯೂ ಮದುವೆಗಾಗಿ ಬಂದಿದ್ದಳು.