ಈ ಪುಟವನ್ನು ಪ್ರಕಟಿಸಲಾಗಿದೆ
ನಾವು ಮಾಡಿದ ಒಂದು ಯಾತ್ರೆ
೩೯

ಬಿಡುವಷ್ಟು ಹಸಿವಾಗಿದ್ದಿತು. ಮೇಷ್ಟ್ರ ಹೆಂಡತಿ ಅಡಿಗೆಯನ್ನು ಚೆನ್ನಾಗಿಯೇ ಮಾಡಿದ್ದರು. ಆದರೆ ಪಾಪಿ ಸಮುದ್ರ ಹೊಕ್ಕರೂ ಮೊಣಕಾಲುದ್ದವೇ ನೀರು ಎಂಬಂತೆ, ಬಾಯಿಗೆ ಒಂದು ತುತ್ತು ಹಾಕುವುದರೊಳಗಾಗಿಯೇ ಬಸ್ಸು ಹಾಸನದ ಕಡೆಗೆ ಹೊರಟುಬಿಟ್ಟಿತು. ಗಡಿಬಿಡಿಯಿಂದ ಊಟವನ್ನು ಮುಗಿಸಿ ಮೇಷ್ಟರಿಗೂ ಅವನ ಹೆಂಡತಿಗೂ ವಂದನೆ ಹೇಳಿ ಬಸ್ಸು ಹತ್ತಿಬಿಟ್ಟೆವು. ಗುಂಡ ದಾರಿಯಲ್ಲಿ ೨-೩ ಸಲ "ಅಡಿಗೆ ಚೆನ್ನಾಗಿತ್ತು; ಆದರೆ ಹಾಳಾದ ಬಸ್ಸು ಊಟಮಾಡೋದಕ್ಕೆ ಅವಕಾಶಕೊಡಲಿಲ್ಲ" ಎಂದ. ಅಂತೂ ಸಂಧ್ಯಾಕಾಲ ೫ ಗಂಟೆಗೆ ಶಿವಳ್ಳಿಗೆ ಹಿಂದಿರುಗಿದೆವು.

ಆ ದಿವಸವೆಲ್ಲಾ ನನಗೆ ಬೇಲೂರು, ಹಳೇಬೀಡಿನ ಯೋಚನೆ ತಪ್ಪಲೇ ಇಲ್ಲ. ಯಾವಾಗಲೂ ಆ ದೇವಸ್ಥಾನಗಳು ಕಣ್ಣೆದುರಿಗೆ ಕಟ್ಟಿರುತ್ತಿದ್ದುವು. ಅವುಗಳನ್ನು ಮರೆತುಬಿಡಬೇಕೆಂದು ನಾನು ಪಟ್ಟ ಪ್ರಯತ್ನವೆಲ್ಲ ವ್ಯರ್ಥವಾಯಿತು. ನನ್ನ ಮಂಕು ಮುಖವನ್ನು ನೋಡಿ ನನ್ನ ಹೆಂಡತಿಯು ಮತ್ತಾವಾಗಲಾದರೂ ನನ್ನನ್ನು ತರಾಟೆಗೆ ತೆಗೆದುಕೊಂಡರೆ ಸರಿ ಎಂದು ಸುಮ್ಮನಾದಳು. ರಾತ್ರಿ ಹಾಸಿಗೆಯಲ್ಲಿ ಮಲಗಿ ಕಣ್ಣು ಮುಚ್ಚಿದಕೂಡಲೆ ದೇವಸ್ಥಾನಗಳೆರಡೂ ಕಣ್ಣೆದುರಿಗೆ ನಿಂತವು. ಆ ಬೇಲೂರು ದೇವಸ್ಥಾನದ ಸ್ತ್ರೀ ವಿಗ್ರಹವಂತೂ ನನ್ನನ್ನ ಬೇಟೆಯಾಡುವುದಕ್ಕೆ ಪ್ರಾರಂಭಿಸಿಬಿಟ್ಟಿತು. ನಿದ್ರೆಮಾಡಲು ನಾನು ಮಾಡಿದ ಪ್ರಯತ್ನ ಎಲ್ಲಾ ವ್ಯರ್ಥವಾಯಿತು. ಅರ್ಧ ನಿದ್ರೆ ಅರ್ಧ ಎಚ್ಚರ. ಕಣ್ಣನ್ನು ಮುಚ್ಚಿದ ಕೂಡಲೆ ಆ ಸ್ತ್ರೀ ವಿಗ್ರಹವು ನನ್ನೆದುರಿಗೆ ನಿಂತಿತು. ಇದ್ದಕ್ಕಿದ್ದಂತೆಯೇ ಅದು ಸಜೀವವಾಗಿ ಪೀತಾಂಬರವನ್ನು ಧರಿಸಿ, ಕಂಪಿನಿಂದಿಂದಾದ ಮಲ್ಲಿಗೆಯ ಮಲರನ್ನು ಮುಡಿದುಕೊಂಡು ನನ್ನೆದುರಿಗೆ ನರ್ತನ ಮಾಡಲಾರಂಭಿಸಿತು. ಆ ನರ್ತನವನ್ನು ನೋಡಿ ನಾನು ಮಗ್ನನಾದೆ. ಎಲ್ಲಿದ್ದೆನೆಂಬುದನ್ನೇ ಮರೆತೆ. ಆ ನರ್ತಕಿಯ ಜೊತೆಯಲ್ಲಿಯೇ ಗಾನ ಪ್ರಪಂಚದಲ್ಲಿಯೂ, ನರ್ತನ ಪ್ರಪಂಚದಲ್ಲಿಯೂ, ಕಲಾ ಪ್ರಪಂಚದಲ್ಲಿಯೂ ಸ್ವರ್ಗಲೋಕದ ಕಡೆಗೆ ಏರಿದೆ. ನರ್ತಕಿಯ ಒಂದೆರಡು ನೋಟದಿಂದಲೂ, ನಿಟ್ಟುಸಿರಿನಿಂದಲೂ ಭೂಮಿಯನ್ನು ಬಿಟ್ಟುಹೋಗಲು ಅವಳಿಗೆ ಸ್ವಲ್ಪ ಪಶ್ಚಾತ್ತಾಪವುಂಟಾಗಿರಬಹುದೆಂದು ತಿಳಿದೆ. ಸ್ವರ್ಗಲೋಕದ ಬಾಗಲಿಗೆ ನರ್ತಕಿಯು ಹೋದಕೂಡಲೆ ಆ ಬಾಗಲು