ಕೊಂಡು, ಅನಂತರ ಮುಂದಕ್ಕೆ ಹೋಗೋಣವೆಂದು ಅವರು ಯೋಚಿಸುತ್ತಾ ನಿಧಾನವಾಗಿ ನಡೆಯುತ್ತಿದ್ದರು.
ಜೋಡಿದಾರರು ಮಧ್ಯೆ ಮಧ್ಯೆ ರಸ್ತೆಯನ್ನು ಬಿಟ್ಟು ಕಾಲುದಾರಿಯಲ್ಲಿ ಹೋಗುತ್ತಿದ್ದರು. ಹೀಗೆ ಮಾಡುತ್ತಿದ್ದುದರಿಂದ ದೂರವು ಸ್ವಲ್ಪ ಕಡಿಮೆಯಾಗುತ್ತಿದ್ದಿತಲ್ಲದೆ ಬೇಸರಿಕೆಯ ತಪ್ಪುತ್ತಿದ್ದಿತು. ಕಾಲುದಾರಿಯಲ್ಲಿ ನಡೆಯುತ್ತಿರುವಾಗ ಮಧ್ಯೆ ಒಂದು ಕೆರೆ ಸಿಕ್ಕಿತು. ಆ ಕೆರೆಯ ಕೋಡಿಯ ನೀರು ಕಾಲುವೆಯಂತೆ ೩ ಫರ್ಲಾಂಗ್ ದೂರ ಹರಿದು ಹೋಗಿದ್ದಿತು. ಆ ಮೂರು ಫರ್ಲಾಂಗನ್ನು ಸುತ್ತಿಕೊಂಡು ಸರಿಯಾದ ದಾರಿಗೆ ಹೋಗಬೇಕಾಗಿದ್ದಿತು. ಬೇಸಗೆಯ ಕಾಲದಲ್ಲಿ ಕೋಡಿಯಲ್ಲಿ ನೀರು ಇರುತ್ತಿರಲಿಲ್ಲವಾದುದರಿಂದ, ಸುತ್ತಬೇಕಾದ ಆವಶ್ಯಕವಿರಲಿಲ್ಲ. ಆಗ ೩ ಫರ್ಲಾಂಗ್ ದೂರ ಉಳಿತಾಯವಾಗುತ್ತಿತ್ತು. ಜೋಡಿದಾರರಿಗೆ ನೀರನ್ನು ಕಂಡ ಒಡನೆಯೆ ಆನಂದವಾಯಿತು. ಈ ೩ ಫರ್ಲಾಂಗ್ ದೂರವನ್ನು ಉಳಿಸಿಬಿಡುತ್ತೇನೆ ಎಂಬುದಾಗಿ ಮನಸ್ಸಿನಲ್ಲಿ ಯೋಚಿಸಿಕೊಂಡರು. ಕೋಡಿಯು ಸುಮಾರು ೨೦ ಅಡಿ ಮಾತ್ರ ಅಗಲವಾಗಿದ್ದಿತು. ಅದನ್ನು ಹಾಯ್ದುಕೊಂಡು ಆಚೆಕಡೆಗೆ ಹೋಗಬೇಕೆಂದು ಯೋಚಿಸಿ, ಜೋಡಿದಾರರು ಉಟ್ಟ ಪಂಚೆಯನ್ನೂ ಅಂಗಿಯನ್ನೂ ಬಿಚ್ಚಿ ತಲೆಗೆ ಕಟ್ಟಿ, ಒಂದು ಚೌಕವನ್ನು ಸೊಂಟಕ್ಕೆ ಸುತ್ತಿಕೊಂಡು ಹೊರಟರು. ಜೋಡಿದಾರರ ಗ್ರಹಚಾರ, ಆ ಕಾಡಿನಲ್ಲಿಯೂ ಕೂಡ ಅದೃಷ್ಟವು ಅವರಿಗೆ ಎದುರಾಗಿದ್ದಿತು.
ಇವರು ಯಾವ ನೇರದಲ್ಲಿ ಹಾಯುವದಕ್ಕಾಗಿ ಕೋಡಿಗೆ ಇಳಿದರೋ, ಅದೇ ನೇರದಲ್ಲಿ ಎದುರು ದಡದಲ್ಲಿ ಗಂಗಡಿಕಾರರ ಹುಡುಗಿಯೊಬ್ಬಳು ಶಾಲೆ ಸೆಣೆ ಸೀರೆ ಒಗೆಯುತ್ತಿದ್ದಳು. ಈ ಧಾಂಡಿಗನನ್ನು ನೋಡಿ ಅವಳಿಗೆ ಭಯವೂ ಆಶ್ಚರವೂ ಉಂಟಾದುವು. "ದಾರಿ ೩ ಫರ್ಲಾಂಗ್ ಆಚೆ ಇದೆ. ಇಲ್ಲಿಯೋ ನೀರು ಕತ್ತುದ್ದ ಇದೆ. ಇವನನ್ನು ನೋಡಿದರೆ ಯಮನಂತೆ ಕಾಣುತ್ತಾನೆ. ದಾರಿಯನ್ನು ಬಿಟ್ಟು, ಈ ಆಳುದ್ದ ನೀರನ್ನು ಇವನು ಹಾಯುವದಕ್ಕೇನು ಕಾರಣ” ಎಂದು ಅವಳು ಯೋಚಿಸತೊಡಗಿದಳು. ಅವಳಿಗೆ ವಯಸ್ಸು ೧೮ ಇದ್ದಿರಬಹುದು. ಸಾಮಾನ್ಯವಾಗಿ ರೂಪವತಿ