ಈ ಪುಟವನ್ನು ಪ್ರಕಟಿಸಲಾಗಿದೆ

ನಮ್ಮ ಹೊಳೆಯ ಒಂದು ಅನುಭವ

೮೧

ಕುಳಿತಿದ್ದರು. ಹನುಮನು ದೂರದಲ್ಲಿ ಬರುವುದನ್ನು ಕಂಡು ಅವರಿಗೆ ಬಹಳ ನಗು ಬಂದಿತು. ಅವನು ಆ ಕಡೆಯಿಂದ ಈ ಕಡೆಗೂ, ಈ ಕಡೆಯಿಂದ ಆ ಕಡೆಗೂ ಓಲಾಡುತ್ತಾ, ಆಭಾಸವಾದ ಪದಗಳನ್ನು ಹಾಡುತ್ತಾ, ಬರುತ್ತಿದ್ದನು. ಅವನ ಬಟ್ಟೆಗಳೆಲ್ಲ ಹೆಂಡದಿಂದ ನೆನೆದುಹೋಗಿದ್ದುವು. ಅವನಿಗೆ ದೇಹದ ಮೇಲೆ ಪ್ರಜ್ಞೆಯೇ ಇದ್ದಂತೆ ತೋರಲಿಲ್ಲ. ಅವನು ದೂರದಿಂದಲೇ ಅಯ್ಯಂಗಾರರನ್ನು ಕಂಡು "ಏನ್ಲಾ ಮೊಗಾ ಅಲ್ಲೆ ನಿಂತ್ಕೋ, ಒಂದು ಬೀಡಿ ಕೊಟ್ಟೆನಂತೆ" ಎಂದನು. ಅಯ್ಯಂಗಾರರಿಗೆ ಆಶ್ಚರ್ಯವಾಯಿತು. “ಬುದ್ದಿ" ಎಂದು ಗೌರವದಿಂದಲೂ ಭಯದಿಂದಲೂ ಮಾತನಾಡಿಸುತ್ತಿದ್ದವನು “ಏನ್ಲಾ” ಅಂದರೆ ಆಶ್ಚರ್ಯವಾಗಬೇಡವೆ? ಅವರು ಕುಳಿತ ಸ್ಥಳದಿಂದ ಎದ್ದರು. ಹನುಮನು “ನಿಂತ್ಕಳ್ಳಾ ಬೀಡಿ ಸೇದ್ಲಾ, ನಾನಿವ್ನಿ ಹೆದರ್ಬೇಡ" ಎಂದು ತೊದಲುತ್ತಾ ದೊಣ್ಣೆಯನ್ನು ತಿರುಗಿಸಿ ಕೊಂಡು ಅವರ ಕಡೆಗೆ ಸ್ವಲ್ಪ ವೇಗವಾಗಿ ಬರಲು ಪ್ರಾರಂಭಿಸಿದನು. ಅಯ್ಯಂಗಾರಿಗೆ ಜಂಘಾ ಬಲವು ತಪ್ಪಿಹೋಯಿತು. “ಎಲಾ ಪಾಪಿ! ಇವನು ಕಂಠಪೂರ್ತಿ ಕುಡಿದುಬಿಟ್ಟಿದ್ದಾನೆ. ಮೈಮೇಲೆ ಪ್ರಜ್ಞೆ ಇಲ್ಲ, ಇದೋ ಕಾಡು, ದೊಣ್ಣೆಯಿಂದ ನನಗೆ ನಾಲ್ಕು ಬಿಟ್ಟರೆ ಮಾಡೋದೇನು? ಈಗ ಪಲಾಯನವೇ ಸರಿಯಾದ ಉಪಾಯ. ಅಪಾಯಕ್ಕೆ ಸಿಕ್ಕಿಕೊಂಡಾಗ ನಮ್ಮ ಕಾಲೇ ನಮ್ಮನ್ನು ರಕ್ಷಿಸಬೇಕು. "ಕಾಲಾಯ ತಸ್ಮೈ ನಮಃ” ಅಯ್ಯಂಗಾರು ಸ್ವಲ್ಪ ವೇಗವಾಗಿ ಹೆಜ್ಜೆ ಹಾಕಿದರು. ಹನುಮನೂ "ನಿಂತ್ಕಳ್ಳಾ ಅಂದ್ರೆ” ಎಂಬುದಾಗಿ ತಾನೂ ವೇಗವಾಗಿ ನಡೆಯಲು ಪ್ರಾರಂಭಿಸಿದನು. ಈ ರೀತಿ ಅವರು ಮುಂದೆ, ಇವನು ಹಿಂದೆ. ಪಾಪ ಅಯ್ಯಂಗಾರರಿಗೆ ಒಳ್ಳೆ ಆಳೇ ದೊರಕಿದ. ಬಿಸಿಲಿನ ಬೇಗೆಯಲ್ಲಿ ಅವರಿಗೆ ಓಡಿ ಓಡಿ ಸಾಕಾಯಿತು. ಎದುರಿಗೆ ಒಂದು ಚಿಕ್ಕ ಕೊಳವು ಕಂಡಿತು. ಅಪಾಯವು ಸನ್ನಿಹಿತವಾದಾಗ ಉಪಾಯವು ತಾನಾಗಿಯೇ ತೋರುತ್ತದೆ. ಅಯ್ಯಂಗಾರರು ಏನೋ ಯೋಚಿಸಿಕೊಂಡು ಕೊಳದ ಮೆಟ್ಟಲಿನ ಮೇಲೆ ಕುಳಿತರು. ಹನುಮನೂ ಅಲ್ಲಿಗೆ ಬಂದನು. “ಅಲ್ಕಾಣ್ಲಾ ಸಟೇಗೆ ಮೆಳ್ಕೆ ನಡದಿದ್ರೆ ನಿನ್ಪ್ರಾಣ ಹೋಗ್ತಿತ್ತ?” ಎಂದನು. ಅಯ್ಯಂಗಾರರು ಯಾವ ಉತ್ತರವನ್ನೂ ಕೊಡದೆ ಅವನನ್ನು ಕೊಳದೊಳಕ್ಕೆ ನೂಕಿಬಿಟ್ಟರು.