ಈ ಪುಟವನ್ನು ಪರಿಶೀಲಿಸಲಾಗಿದೆ

ಅಭಯ ೨೩೩

" ಅದೇನ್ರೀ ಅದು ? ಗಂಡಸರೆಲ್ಲ ಪರಿಶುದ್ಧವಾಗಿರ್‍ತಾರೊ ?"
" ಹಾಗಲ್ಲ ಕೆಟ್ಟ ರೋಗ ಏನಾದ್ರೂ--”
" ಪಾಪ! ಗಂಡಸ್ರಿಗೂ ಈ ರೋಗಕ್ಕೂ ಏನು ಸಂಬಂಧ ಇಲ್ಲ ಅಲ್ವೆ?”
ಅವರು 'ರೋಗ' ಎನ್ನುವುದಕ್ಕೂ ಆ ಬಡಾವಣೆಯ ಲೇಡಿ ಡಾಕ್ಟರು -
ಸಮಾಜದ ಸದಸ್ಯೆ - ಒಳಬರುವುದಕ್ಕೂ ಸರಿಹೋಯಿತು
" ಆ ವಿಷಯ ಡಾಕ್ಟರನ್ನ ಕೇಳಿ ”
--ಎಂದರು ಯಾರೋ ಒಬ್ಬರು
ರೋಗದ ಹೆಸರು ತಿಳಿದು ಡಾಕ್ಟರಮ್ಮನಿಗೆ ತಮಾಷೆ ಎನ್ನಿಸಿತು
" ನಾವಿರೋದು ಯಾತಕಪ್ಪ ಮತ್ತೆ ? ಏನೂ ಹೆದರ್‍ಕೋಬೇಡಿ ಎಂಧ
ರೋಗ ಇದ್ದರೂ ಗುಣಪಡಿಸ್ತೀನಿ "
ಅಷ್ಟು ಹೇಳಿ ಆ ಡಾಕ್ಟರು ಸುಮ್ಮನಿರಲಿಲ್ಲ ತುಂಟನಗೆ ನಕ್ಕು,
ಕುಳಿತಿದ್ದವರನ್ನೆಲ್ಲ ನಿಧಾನವಾಗಿ ನೋಡುತ್ತ ಅಂದರು :
" ಈಗ ಹೇಳಿ ಯಾವಕಾಹಿಲೆ ? ಯಾರಿಗೆ ಏನಾಗಿದೆ ?"
ಆ ಮಹಿಳಾ ಮಣಿಗಳ ಮುಖಗಳು ಕೆಂಪಗಾದುವು. ಅವರಲ್ಲೊಬ್ಬರು
ನಸುನಕ್ಕು ಅಂದರು :
" ಡಾಕ್ಟರ್ ! Dont be silly !”

" ಅದೇನೊ ಅಭಯಧಾಮದಲ್ಲಿ ಒಳ್ಳೇ ಹುಡುಗೀರು ಸಿಗ್ತಾರಂತಲ್ಲೊ
ಮಹಾಬಲ, ಮದುವೆ ಮಾಡ್ಕೊಂಬಿಡು. ಖರ್ಚೂ ಹೆಚ್ಚಾಗಲ್ಲ.”
--ಎಂದು ಸಾಹೇಬರ ಹೆಂಡತಿ ಆ ರಾತ್ರೆ ತಮ್ಮ ಜವಾನನಿಗೆ
ಹೇಳಿದರು.
ಮಹಾಬಲ ಅಭಯಧಾಮವನ್ನು ಪತ್ತೆಹಚ್ಚಿ ಅದರ ಸುತ್ತು ಮುತ್ತು
ಸುಳಿದುದೂ ಆಯಿತು. ಆದರೆ ಮುಂದುವರಿಯುವ ಕ್ರಮ ಅವನಿಗೆ
ಗೊತ್ತಾಗಲಿಲ್ಲ ಮತ್ತೆ ಬಂದು 'ಅಮ್ಮಾವರನ್ನೇ' ಪೀಡಿಸಿದ.
ಅವರು ಅಭಯಧಾಮದ ಕಾರ್ಯದರ್ಶಿನಿ ಕಮಲಮ್ಮನಿಗೆ ಕಾಗದ
ಬರೆದು ಕೊಟ್ಟರು. ಅದಾದಮೇಲೆ ಒಂದು ತಿಂಗಳ ಅನಂತರ, ಡಿಸೆಂಬರ್‌ನಲ್ಲಿ
ಜವಾನ ಮಹಾಬಲ 'ನವಜವಾನ' ನಾಗಿ ಅಭಯಧಾಮಕ್ಕೆ ಭೇಟಿಕೊಟ್ಟ.