ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹೊತ್ತಿಗೆ ಹಿಂಗಾಗಿ ಬಿಟ್ಟಿರವನಲ್ಲಾ, ಯಾದಾರ ದೆವ್ವ ಗಿವ್ವ ಬಡಕೊಂಡಿರಬೌದೋ ಹೆಂಗೆ ಅಂತ ಮಮ್ಮಲನೆ ಯೋಚಿಸಿದಳು. ಜಗಲೂರೆಜ್ಜನನ್ನು ಮನದಾಗೆ ಸ್ಮರಿಸಿದಳು. ರಾಜಮಾತೆ ಭ್ರಯ್ರಮಾಂಬೆಯ ಮೆಳ್ಳಗಣ್ಣು ತಾಕಿರಬೌದೆಂದು ಭಾವಿಸಿ ವುಪ್ಪು ಬೆಳ್ಳಗಡ್ಡೆ ಯಿಳೇ ತೆಗೆದು ಹಾಕಿ ನೋಡಿದಳು. ವಲೇಲಿ ಆಟೊಂದು ಘಾಟ ಆದರೂ ಆತನ ಮೂಗಿನಿಂದ ವಂದಾರ ಸೀನು ಬಾರಲಿಲ್ಲ.. ಕಲ್ಲು ಗುಂಡಿನಂಗ ಕೂಕಂಡೇ ಕೂಕಂಡಿದ್ದ. ಯಿಂಥ ಅನುಭವ ತನಗೆಂದೂ ಆದುದಿಲ್ಲ.. ಯಿದು ಯಿದೇ ಮೊದಲ ಸಲ.. ಯೀಸು ವರುಸ ದಿನಮಾನ ತಾನು ಹೇಳಿದಂಗ ಕೇಳಿಕಂಡಿದ್ದ ತನ್ನ ಗಂಡ ತನ್ನತ್ತ ವಂದು ಸಲ ಕಣ್ಣೆತ್ತಿ ಮಾತಾಡದಿರುವುದೆಂದರೇನು? ವಂದೇ ವಂದು ಮಾತುದುರಿಸದಿರುವು ದೆಂದರೇನು? ಯೀತನು ಯೀತನಾಗಿಲ್ಲ.. ಯೀತನೊಳಗೆ ಪೀಡೆ ಪಿಶಾಚಿ ಸೇರಿಕೊಂಡಿರಬೌದೆಂದು ಭಾವಿಸಿದ ಆಕೆಯು ಮಂತ್ರಗಾರ ಮರೆಪ್ಪನ ಮನೆಗೆ ಹೋಗಿ “ಮಾವಾ.. ಯಾಕಾ ಮುದೇತ ಅವುಸದಕ ಬೇಕಂದರ ವಂಧವಂದ ಮಾತಾಡುತಾಯಿಲ್ಲಾ.. ಅಯ್ಲುಗೇಡಿ ಹಂಗ ಕುಂತುಗಂಡಾನ.. ವಂಧಅಂತರ ಮಂತರಿಸಿಕೊಟ್ಟು ಆತನ್ನ ನಿಸೂರು ಮಾಡು” ಯಂದು ಕೇಳಿಕೊಂಡಿದ್ದಕ್ಕೆ ಆತನಿದ್ದು “ಯಿದು ಗಾಳಿ ಸವುಡಿರಬೇಕವ್ವಾ” ಯಂದು ಅಂತರ ಮಂತರಿಸಿ ಕೊಟ್ಟನು. ಆಕೆಯು ಅದನ್ನು ತಂದು ತನ್ನ ಮುದೇತನ ರೆಟ್ಟೆಗೆ ಕಟ್ಟಲು ಧಯರ್ಯ ಸಾಲದೆ ಮುಂದಿಟ್ಟು ಲೋಬಾನದ ಹೊಗೆ ಹಾಕಿದಳು. “ಯೀಗ್ಲಾರ ಯದ್ದೇಳೋ.. ಸಣಕಂದಮ್ಮನಂಗ ನೋಡ್ಕಂಡಿರೋ ನನ ಸಂಗಾಟ ವಂದೆಲ್ಡು ಮಾತಾಡೋ..’’ ಯಂದು ಗಗ್ಗರಿಸಿ ಕೇಳಿದಳು. ಆದರೆ ಆತ ತುಟಿ ಪಿಟಕ್ಕೆನ್ನಲಿಲ್ಲ.. ಹಿಂಗ ಆಕೆ ಮಾಡಿದ್ದು ತರಾವರಿ ಯತ್ನಗಳ ಪಯ್ಕಿ ವಂದಾರ ಫಲಕಾರಿಯಾಗಲಿಲ್ಲ. ಯಂದೂ ಗಂಡನೆದುರು ಅತ್ತಾಕಿಯಲ್ಲದ ಆಕೆಯ ಕಣ್ಣಲ್ಲಿ ವರತೆ ಮೂಡಿತು. ಅಯ್ಯೋ ನನ್ನ ಕರುಮವೇ.. ಯೀ ಯಿಳೀ ವಯಸ್ಸಿನಾಗ ಕಣ್ಣೀರ್ನ ಕಪಾಳಕ್ಕ ತಂದುಕೋಬೇಕಾಗಿ ಬಂತಲ್ಲಾ.. ನಾನು ಮಾಡಿರೋ ತಪ್ಪೇನಾರ ಯಿದ್ರಅದನ್ನಾರ ಹೇಳೋ” ಯಂದು ಆತನೆದುರ ತಲೆಗೆ ಕಯ್ನ ಹಚಕಂಡು ಕೂತಳು. ಆದರೂ ಆತನ ಬಾಯಿಯಿಂದ ವಂದಾರ ಮಾತು ವುದುರಲಿಲ್ಲ....

ಧಯರ್ಯ, ಆತುಮ ಯಿಸುವಾಸಕ್ಕೆ ತವರೆಂದೆನಿಸಿದ್ದ ಜಗಲೂರೆವ್ವ ಬಿರು ಬಿರನೆ ಅಂಗಳಕ್ಕೋಡಿ “ಯ್ಯೋಯ್ ಕರಯೀರಾss ಯ್ಯೋಯ್ ಮಾಳಕ್ಕಾss.. ಯ್ಯೋಯ್ ಬಾಯವ್ವತ್ತೆss ಯ್ಯೋಯ್ ಭರಮಜ್ ಮಾಮೋss.. ಬರ್ರೆಪ್ಪಾ..