ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹುಲಿ ಚರುಮಕ ವರಸಿಕೊಂಡು ಯಲಡಕೆ ನಮಲುತ್ತ ಗಂಧದ ಮರದಡೀಲಿ ಗದ್ದುಗೆ ಮ್ಯಾಲ ಯಿರಾಮವಾಗಿ ಕೂಕಂಡಿದ್ದ ಆ ಜಗನ್ನಾಥನು ಆಚ್ಚರ್ಯಪಟ್ಟು ಕೇಳಿದನು. ಆಗ ಚನ್ನವ್ವನು “ಅಗೋ ಅಣುಕಿ ನೋಡಲ್ಲಿ.. ಭೂಲೋಕಕ್ಕಧಿಕವಾಗಿ ಕುಂತಳ ದೇಸ ವಂದಯ್ತಲ್ಲ.. ಆ ಕುಂತಳ ದೇಸಕ್ಕದಿsಕವಾದ ಕುದುರೆಡವು ಪಟ್ಟಣ ವಂದಯ್ತಲ್ಲ.. ಆ ಕುದುರೆಡವು ಪಟ್ಟಣಕ್ಕದಿsಕವಾಗಿ ಥೆಳಗೇರಿ ವಂದಯ್ತಲ್ಲ.. ಆ ಥೆಳಗೇರಿಗೆ ಛತ್ರಿಚಾಮರ ಹಿಡದಂಗ ಬೇಯಿನ ಮರ ಮೊಂದಯ್ತಲ್ಲ.. ಆ ಮರದಡೀಲಿ ಜಗಲೂರೆವ್ವ ಯಂಬ ಸಾದ್ವಿಯು ಗಂಡನಿದ್ದೂ ರಂಡೆಯಾಗಿ, ಯಂಜಲೆಲೆಯಂಥಾಗಿ ದುಕ್ಕ ಮಾಡುತ್ತಿರುವಳು.. ನೋಡು” ಯಂದು ಬೊಟ್ಟು ಮಾಡಿ ತೋರಿಸಿದಳು. ಪರಮಾತುಮನು ಆಕೆ ಮಾಡಿದ ಬೊಟ್ಟಿನ ಗುಂಟ ಹೋಗಿ ನೋಡಿಯೂ ನೋಡದವನಂಗೆ “ನನ್ನ ಪರಮ ಭಕುತೆಯಾದ ಚನ್ನವ್ವನೇ.. ಚಿತ್ತಯಿಟ್ಟು ಕೇಳು ತಾಯಿss ತಿರುಗಾಡಿ ತಿರುಗಾಡಿ ಪಾದ ನೊಂದವವ್ವಾ.. ಕೊಟ್ಟೂ ಕೊಟ್ಟೂ ಕಯ್ಯಿಗಳು ನೊಂದಾವವ್ವಾ..” ಎನ್ನಲು ಆಕೆಯು “ಕಾಲನೊಂದರ ಹಿಜಗತೀನಪ್ಪಾ.. ಆದರ ನೀನು ಮಾತ್ರಜಗಲೂರವ್ವನ ದುಕ್ಕ ಕಮ್ಮಿ ಮಾಡಬೇಕಪ್ಪಾ” ಯಂದೆನ್ನಲು, ಅದಕಿದ್ದು ಆ ಸಾಯಿರ ಸರುಪಗಳ ಸರದಾರನು “ನನ್ನ ಮನೆ ವಳ ಹೊರಗ ಕಸ ಮುಸುರೆ ಮಾಡೋರಿಲ್ಲ.. ನಂದೇ ನನಗ ಮಸ್ತುದಗದ ಅಯ್ತೆ.. ನಾನು ಯೀರೇಳು ಲೋಕಕ ಮರುಗಬೇಕು.. ಆದರ ಯೀರೇಳು ಲೋಕದೊಳಗ ನನಗ ಮರುಗೋರು ಯಾರಿದ್ದಾರ ನೀನೇ ಹೇಳು ತಾಯಿ” ಯಂದೆನ್ನಲು ಅದಕಿದ್ದು ಆಕೆಯು “ಯಾಕಿಲ್ಲಪ್ಪಾ.. ನಾನೇ ನಿನ್ನ ಚಾಕರಿ ಮಾಡತೇನ.. ಆದರ ನೀನು ಮಾತ್ರಜಗಲೂರೆವ್ವನ ದುಕ್ಕ ಕಮ್ಮಿ ಮಾಡಲಕ ಬೇಕಪ್ಪಾ..” ಯಂದು ಜವಾಬಿಗೆ ಯದುರು ಜವಾಬನ ಕೊಡುತ ಅಂದಳು. ಹಿಂಗ ಅವರಿಬ್ಬರ ನಡುವೆ ವಾದ ಪ್ರತಿವಾದ ನಡೆಯಿತು. ವಬ್ಬರೂ ಸೋಲುವಲ್ಲರು, ವಬ್ಬರೂ ಮಣಿವಲ್ಲರು, ಕೊನೀಕಿದ್ದು ಚನ್ನವ್ವನು “ಹಿಂಗ ನೀನು ನೆಪ ಹೇಳಿ ಜಾರಿಕೊಂಡರ ನಾನು ನನ್ನ ಪಾತೀವ್ರತ್ಯದ ಅಸ್ತರವನ್ನು ನಿನ ಮ್ಯಾಲ ಪ್ರಯೋಗ ಮಾಡಬೇಕಾಗತಯ್ತೆ.. ಅದರ ಮ್ಯಾಲ ನಿನ್ನಿಷ್ಟ” ಯಂದು ನಿಷುವಿರವಾಗಿ ಅಂದುಬಿಟ್ಟಳು. ಅದನು ಕೇಳಿ ಹೆದರಿದ ಸಿವನು “ಮಾ ಪತಿವ್ರತೆಯಾದ ನೀನೆ ಹಿಂಗಾಡಿದರ ಹೆಂಗ ಕನವ್ವಾ.. ಕಲಿ ಕಾಲ ಬಂತೂ ಬಂತು ನನ ನಸೀಬ ನೆಟ್ಟಗಿಲ್ಲದಂಗಾಗಯ್ತೆ, ಕಲಿಯ ತಿಕ್ಕಡಿ ನನಗೂ ಬಡಕೊಂಡಯ್ತೆ.. ಕೊಡೋದು ಕಾಪಾಡೋದೆಲ್ಲ ದ್ವಾಪರಕ ಮುಗುದು ಹೋಯ್ತು ತಾಯಿ.. ಜಗಲೂರೆವ್ವ ನಿನ್ನಂಗ ಸರಣೆ