ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ೧೬೫

  "ಬಿಟ್ಟು ಬರೋದೆ? ದೇವಕಿ ಬಾಣಂತಿಯಾಗೋವರೆಗೂ ಅವರೆಲ್ಲ ಇಲ್ಲೇ

ಇರಾರೆ."

  'ಅವರೆಲ್ಲ'-ಎಂದ ಪುಣ್ಯತ್ಮ! ಜಾನಕಿಯೂ ಇನ್ನಷ್ಟು ದಿವಸ ಇಲ್ಲೇ

ಇರುವಳೆಂದಾಯಿತು.

  ಕಣ್ಣ ಅಪ್ಪು ವನ್ನೆ ನೆಟ್ಟದೃಷ್ಟಿಯಿಂದ ನೋಡುತ್ತಿದ್ದ. ತನ್ನ

ಮನಸ್ಸಿನೊಳಗಿದ್ದುದನ್ನೇನಾದರೂ ಕಣ್ಣ ಓದಬಹುದೆಂದು ಅಪ್ಪು ಗಂಭೀರನಾಗಿ, "ಬಾ ಚಿರುಕಂಡನಲ್ಲಿಗೆ ಹೋಗೋಣ. ಮಳೆಗಾಲದ ಕಾರ್ಯಕ್ರಮದ ವಿಷಯ ಚರ್ಚಿಸ್ಬೇಕು" ಎಂದ.

  ತನ್ನ ಜತೆಗಾತಿಯಾಗಬೇಕಾದ ಹೆಣ್ಣು ಜೀವಕ್ಕೆ ಸಂಬಂಧಿಸಿದ ಯೋಚನೆಗಳೆಲ್ಲಾ

ಈವರೆಗೂ ಜಾನಕಿಯ ಆಗಮನಕ್ಕೋಸ್ಕರವೇ ಕಾದಿದ್ದುವೇನೋ ಎಂಬಂತೆ, ಈಗ ನೊಗಹರಿದು ಓಡಾಡಿದುವು. ಮಾಡಬೇಕಾದ ಕೆಲಸ ಬೆಟ್ಟದ ಹೊರೆಯಷ್ಟಿರುವಾಗ, ಸಾಧಿಸಬೇಕಾದ ಗುರಿ ಇನ್ನೂ ದೂರವಿರುವಾಗ, ಇಂತಹ ಯೋಚನೆ ಮಾಡಬಾರದು ಎಂದು ತನ್ನನ್ನು ತಾನೇ ಅಪ್ಪು ಟೀಕಿಸುತ್ತಿದ್ದ. ಯಾರೊಡನಾದರೂ ಈ ವಿಷಯ ಹೃದಯ ತೆರೆದು ಮಾತನಾಡಬೇಕು ಎನಿಸುತ್ತಿತ್ತು. ಆದರೆ, ಅವರೇನೆನ್ನುವರೋ ಎಂಬ ಅಳುಕು ಬಾಧಿಸುತ್ತಿತ್ತು. ಉದಾಹರಣೆಗೆ ಮಾಸ್ತರು. ಅವರಿಗೆ ತಿಳಿಸದೆ, ಸಲಹೆ ಕೇಳದೆ, ಯಾವ ಕೆಲಸವನ್ನೂ ಎಂದೂ ಅಪ್ಪು ಮಾಡಿದವನಲ್ಲ. ಆದರೆ. ಈ ವಿಷಯ ಅವರೊಡನೆ ಪ್ರಸ್ತಾಪಿಸುವುದು ಹೇಗೆ? ಸದ್ಯ: ಈ ಯೋಚನೆ ಬೇಡವೆಂದು ಸುಮ್ಮನಿರುವುದು ಸಾಧ್ಯವಿತ್ತು. ಆದರೆ ಆ ತಿಂಗಳ ಕೊನೆಯಲ್ಲಿ- ಇನ್ನು ಕೆಲವೇ ದಿನಗಳಲ್ಲಿ-ಮಾಸ್ತರು ಕಯ್ಯೂರು ಬಿಟ್ಟು ಹೋಗುವರೆಂಬ ಅರಿವು ಅಪ್ಪುವಿನ ಕಳವಳವನ್ನು ತೀವ್ರಗೊಳಿಸಿತು.

  ಇದೆಲ್ಲದರ ಸೂಕ್ಷ್ಮ ಪ್ರತಿಬಿಂಬ ಆತನ ನಡೆನುಡಿಯಲ್ಲಿ ಕಾಣಿಸದೆ ಇರಲಿಲ್ಲ.

ಚಿರುಕಂಡ, ಅಪ್ಪುವನ್ನೇನೋ ಬಾಧಿಸುತ್ತಿದೆ ಎಂದು ಮನಗಂಡ.

  ಒಂದು ದಿನ ಅಗತ್ಯದೊಂದು ಕೆಲಸಕ್ಕಾಗಿ ಅಪ್ಪುವನ್ನು ಹುಡುಕಿಕೊಂಡು

ಚಿರುಕಂಡ ಬಂದ. ಅಪ್ಪು ಮನೆಯಲ್ಲಿರಲಿಲ್ಲ. ಹೋಟಲಿನಲ್ಲೂ ಇರಲಿಲ್ಲ. ಕಣ್ಣನ ಮನೆಯಲ್ಲಿರಬಹುದೇನೋ ಎಂದು ಅಲ್ಲಿಗೆ ಹೋದ. ಅಲ್ಲಿಯೂ ಇರಲಿಲ್ಲ. ಆ ಮನೆಯಲ್ಲಿ "ಇಲ್ಲ" ಎಂದು ಉತ್ತರ ಕೊಟ್ಟವಳು ಒಬ್ಬ ಹುಡುಗಿ. ಮುಖಲಕ್ಷಣದಿಂದಲೇ ದೇವಕಿಯ ತಂಗಿ ಇರಬೇಕೆಂದು ಚಿರುಕಂಡ ಊಹಿಸಿದ. ನದಿಗೇನಾದರೂ ಹೋಗಿರಬಹುದೆಂದು ಅತ್ತ ನಡೆದ. ಅಲ್ಲಿ ಮರದ ನೆರಳಿನಲ್ಲಿ ಹಾಸುಗಲ್ಲಿನ ಮೇಲೆ, ತುಂಬಾ ವ್ಯಾಕುಲಕ್ಕೆ ಒಳಗಾದವನ ಹಾಗೆ ಮಲಗಿದ್ದ ಅಪ್ಪು.