ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ೧೯೯

ನಾಲ್ಕೇಟು!"

  "ಇದರ ಪರಿಣಾಮ ಏನಾದೀತೂಂತ ಗ್ಯಾನ ಇರ್ಲಿ!" ಎಂದು ಸುಬ್ಬಯ್ಯ ಕಿರಿಚಿದ.
  ನಾಯಕನ ನಿರ್ದೇಶನವನ್ನಿದಿರು ನೋಡುತ್ತ ಜನ ಹಾಗೆಯೇ ನಿಂತರು. ಮುಖ

ಕೆಂಪೇರಿದ ಅಬೂಬಕರ್ ಗೆ ತಾನು ತಿರುಗಿ ಹೊಡೆಯಬೇಕೇ ಬೇಡವೇ ಎಂಬುದು ಬಗೆಹರಿಯದ ಪ್ರಶ್ನೆಯಾಯಿತು. ಮಾತು ಮಾತ್ರ ಹೊರಟಿತು:

  "ಹೊಡೆರದಿಯಾ ಮಗನೆ?"
  "ಮಗ ಅಂದಿಯಾ?"
  ಮತ್ತೆ ಕೈಬೀಸಿದ ಸುಬ್ಬಯ್ಯ. ಚಿಕ್ಕವನಾದ ಕುಟ್ಟಿಕೃಷ್ಣ ಆತನನ್ನು ಹಿಂದಕ್ಕೆ

ತಳ್ಳಿದ. ಮುಗ್ಗರಿಸಿ ಬೀಳುವ ಹಾಗಾಯಿತು. ಕ್ಷಣಾರ್ಧದಲ್ಲಿ ಆತ ಸಾವರಿಸಿಕೊಂಡು, ಕುಟ್ಟಿ ಕೃಷ್ಣನನ್ನು ಬೂಟುಕಾಲಿನಿಂದೊದೆದ. ಹುಡುಗನ ಎಳೆಯ ಕಂಠದಿಂದ "ಆ!" ಎಂದು ಸ್ವರ ಹೊರಟಿತು. ಜನ ಎಲ್ಲರೂ ಒಮ್ಮೆಲೆ ಮಾತನಾಡುತ್ತ ಪೋಲೀಸನ ಮೇಲೇರಿದರು. ಸುತ್ತಮುತ್ತಲಿಂದಲೂ ರೈತರು ಓಡಿಬಂದರು. ಸುಬ್ಬಯ್ಯನಿಗೆ ಏಟುಗಳು ಬಿದ್ದವು. ನೋವು ತಡೆಯಲಾರದೆ ಆತ ಗುಂಪನ್ನು ಭೇದಿಸಿ ಹೊರಬಂದ. ಟೋಪಿ ಹೊಲಕ್ಕೆ ಬಿತ್ತು. ಅದನ್ನು ಲೆಕ್ಕಿಸದೆ ಸುಬ್ಬಯ್ಯ ಓಡಿದ. ಓಡುತ್ತಿದ್ದ ಆತನನ್ನು ಸ್ವಯಂಸೇವಕರೂ ಬೆನ್ನಟ್ಟಿದರು. ಕಣ್ಣನೂ ಬಾವುಟವನ್ನೆತ್ತಿಕೊಂಡೇ ಜನರ ಜತೆಯಲ್ಲಿ ಸಾಗಿದ. ನೂರು ಗಜ ಓಡುವಷ್ಟರಲ್ಲೇ ಸುಬ್ಬಯ್ಯ ಕಾಲು ಜಾರಿ ಬಿದ್ದ. ಎದ್ದು ಮತ್ತೆ ಒಡಿದ. ಜನರ ಕೂಗು ಸಮೀಪದಲ್ಲೆ ಕೇಳಿಸಿ, ಹೊಲದ ಮಣ್ಣು ಹೆಂಟೆಯೊಂದು ಬೆನ್ನಿಗೆ ತಗಲಿದಂತಾಗಿ,ಸುಬ್ಬಯ್ಯ ಅಧೀರನಾದ. 'ಬದುಕಿದರೆ ಸಾಕು' ಎನ್ನುವ ಹಾಗಾಯಿತು ಆತನ ಸ್ಥಿತಿ. ಆದರೂ ರೈತರೆದುರು ಸೋಲನ್ನೊಪ್ಪಿಕೊಳ್ಳಲಾರದೆ ಆತ ನದಿಯ ದಂಡೆಗೆ ಧಾವಿಸಿ ನೀರಿಗೆ ಧುಮುಕಿದ.

  ಜನ ಬಂದು ನೆರೆದರು. ಆತ ಈಸಿ ಆಚೆಯ ದಡಕ್ಕೆ ಹೋಗಿ ಪಾರಾಗುವ

ನೆಂಬುದು ಸ್ಪಷ್ಟವಾಯಿತು. "ಕಳ್ಳ ತಪ್ಪಿಸ್ಕೊಂಡ!" ಎಂದರು ಹಲವರು. "ನೀಲೇಶ್ವರದ ಹಾದಿಯಾಗಿ ನಡೆದುಕೊಂಡೇ ಹೊಸದುರ್ಗಕ್ಕೆ ಹೋಗಲಿ ಘೌಜದಾರರು!" ಎಂದನೊಬ್ಬ. "ಇನ್ನೊಮ್ಮೆ ಬಾ, ಕಲಿಸ್ತೇವೆ" ಎಂದಿತು ಒಂದು ಬಾಲ ಕಂಠ.

  ಕಣ್ಣನೂ ಬಾವುಟದೊಡನೆ ಬಂದು ತಲಪಿದ.
  ಯಾರೋ ಅಂದರು:
  "ಬನ್ನಿರೋ, ನದಿಗಿಳೀರಿ, ಹಿಡಿದು ತರೋಣ ಅವನನ್ನ!"
  "ಬೇಡಿ, ಬೇಡ! ಎಂದು ಹಲವರೆಂದರು.
  "ತಗೊಳ್ಳಿ ಒಂದೊಂದು ಕಲ್ಲು. ಉಡುಗೊರೇನಾದರೂ ಕೊಟ್ಟು ಕಳಿಸೋಣ."