ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ೨೮೧

       ಆಗೋ, ಸ್ವಯಂಸೇವಕರು ಕೆಂಪು ಗುಲಾಬಿ ಕೊಡುತ್ತಿದ್ದಾರೆ. ಬನ್ನಿ,
    ತೆಗೆದುಕೊಳ್ಳೋಣ.
       ಈ ಚೆಂಗುಲಾಬಿ ಅಳಿದ ಹುತಾತ್ಮರ ನೆನಪಿಗೆ ಅರ್ಪಣೆ....
       ಶಿಲೆಯ ಮೇಲೆ ರಕ್ತಾಕ್ಷರಗಳಲ್ಲಿ ಕೊರೆದಿರುವುದನ್ನು ಓದಿದಿರಾ? 
           ಬದುಕನ್ನು ಪ್ರೀತಿಸಿದ ಈ ಬಾಂಧವರು ಒಳ್ಳೆಯ
         ಬದುಕಿಗೋಸ್ಕರ ದುಡಿದರು, ಮಡಿದರು.
        ಅಗಲಿದ ಸೋದರರೇ! ಇಗೋ ನಮ್ಮ ವಿಪ್ಲವ ವಂದನೆ! ಇಗೋ ನಮ್ಮ
    ರಕ್ತ ನಮಸ್ಕಾರ!
        ನಿಮ್ಮ ಕನಸೆಲ್ಲ ನನಸಾಗಿಲ್ಲ ಎಂದು ನಾವು ಬಲ್ಲೆವು. ನಮ್ಮ ನಾಡೇನೋ 
    ಸ್ವತಂತ್ರವಾಗಿದೆ. ಆದರೆ ಇದಿನ್ನೂ ಸಮತೆಯ ಸೋದರತ್ವದ ಸುಖಶಾಂತಿಯ
    ಬೀಡಾಗಿಲ್ಲ. ಕಲ್ಲುಮುಳ್ಳಿನ ಹಾದಿ ನಡೆದು ಒಂದು ಘಟ್ಟವನ್ನೀಗ ನಾವು
    ತಲಪಿದ್ದೇವೆ. ಇಲ್ಲಿಂದ ಇನ್ನೊಂದು ಘಟ್ಟಕ್ಕೆ ಇನ್ನು ಪಯಣ.ಅದನ್ನೂ
    ಯಶಸ್ವಿಯಾಗಿಯೆ ಮುಗಿಸಿ ಗುರಿ ಸೇರುವ ವಿಷಯದಲ್ಲಿ ನಮಗೆ ಸಂದೇಹವಿಲ್ಲ.
    ವೀರಪರಂಪರೆಯುಳ್ಳ ನಿರ್ಮಲ ಚಾರಿತ್ರ್ಯವುಳ್ಳ ನಮ್ಮ ಜನತೆಗೆ ಆ ಶಕ್ತಿಯಿದೆ,
    ಹೇರಳವಾಗಿ ಇದೆ.
        ಭಾಷಣ....
        ಈ ನಾಡಿನ ವೃದ್ಧ ರೈತನಾಯಕ ಮಾತನಾಡುತ್ತಿದ್ದಾರೆ:
       "ದೇಶಬಾಂಧವರೇ! ಆ ವೀರ ಬದುಕಿನ ಅಮರ ಸಂದೇಶಕ್ಕಿಂತ ಹೆಚ್ಚಿನ ಯಾವ
    ಮಾತನ್ನು ತಾನೇ ನಾನು ಆಡಬಲ್ಲೆ ?  ಅವರ  ಕನಸನ್ನು  ಪೂರ್ತಿಯಾಗಿ   
    ನನಸುಗೊಳಿಸುವ ಭಾರ ನಿಮ್ಮದು. ನಿಮ್ಮ ಸ್ಮೃತಿಪಟಲದಲ್ಲಿ ಕಯ್ಯೂರು ವೀರರ
    ಸ್ಮರಣೆ ಚಿರಕಾಲ ಹಸುರಾಗಿರಲಿ! ಬದುಕಿನ ಹಾದಿಯಲ್ಲಿ ಮುಂದಕ್ಕೆ ಸಾಗುವ
    ನಿಮಗೆಲ್ಲ ಆ ಸ್ಮರಣೆ ತಿಳಿವು ನೀಡುವ ಬೆಳಕಾಗಲಿ!"
        ಕನ್ನಡನಾಡಿನ ಓ ಬಾಂಧವ! ಬನ್ನಿ! ಜನ ಜಯಘೋಷ ಮಾಡುತ್ತಿದ್ದಾರೆ.
    ನಾವೂ ಸ್ವರ ಸೇರಿಸೋಣ:
        "ಕಯ್ಯೂರು ಹುತಾತ್ಮರ ವೀರಸ್ಮರಣೆಗೆ
        ----ರಕ್ತನಮಸ್ಕಾರ!"
         ಕಯ್ಯೂರು ವೀರಯೋಧರ ಚಿರಸ್ಮರಣೆಗೆ
        ----ರಕ್ತನಮಸ್ಕಾರ!"
                                      __________