ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹೀಗಾಗ್ತಿತ್ತೆ?ಅಂತೂ ಹೊಲವೋ ಅವರದೂಂತ ಆದ್ಮೇಲೆ ಹ್ಯಾಗೆ ಬರೆದರೇನು ಹೇಳು?..." ಸ್ವಲ್ಪ ಹೊತ್ತು ಒಬ್ಬರೂ ಮಾತನಾಡಲಿಲ್ಲ. ಒಳಗಿನೊಂದು ಗಾಯ ಮಿಸುಕಿದಂತಾಗಿ ತಾಯಿ ಕೇಳಿದಳು: "ಜಮೀನ್ದಾರ್ರು ಒಳ್ಳೆಯವರೂಂತಹಿಂದೆ ಹೇಳಿದ್ರಿ,ಅಲ್ಲ?" ತಂದೆಯ ಮುಖದಿಂದ ಬಿಸಿಯುಸಿರು ಹೊರಟಿತು.

"ಮಹಾನೀಚ,ಬಡ್ಡಿ ಅಲ್ದೆ,ಈವರೆಗೂ ಎಳನೀರು,ತೆಂಗಿನಕಾಯಿ,ತರಕಾರಿ,ಕಬ್ಬು-ಎಲ್ಲ ಕಪ್ಪ ಒಪ್ಪಿಸ್ತಿದ್ವಿ ಅವನಿಗೆ.ನಮ್ಮ ಬಿತ್ತನೆ-ಕುಯ್ಲು ಆದ್ಮೇಲೆ,ಅವನ ಹೊಲದಲ್ಲಿ ಬಿಟ್ಟಿ ದುಡೀತಿದ್ವಿ...ಅದೊಂದರ ನೆನಪೂ ಅವನಿಗಿಲ್ಲ.ಅವತ್ತು ಅವನ ಮಗಳ ಮದುವೆ ಸಮಯದಲ್ಲಿ,ನಾವು ಮದುವೆ ಕಂದಾಯ ಕೊಟ್ಟಿದ್ದಲ್ದೆ ಗುಲಾಮ ಚಾಕರೀನೂ ಮಾಡಿದ್ವಿ...."

"ಬೇಡಿ...ಅದನ್ನೆಲ್ಲಾ ಯಾತಕ್ಕೇಂತ ಹೇಳ್ತೀರಿ?" "ಒಳಗೆ ಉರಿ ಎದ್ದಿದೆ ಕಲ್ಯಾಣಿ.ಏನು ಮಾಡಿದರೆ ಅದು ಆರೀತೋ?" "ನಮ್ಮ ಹಣೇ ಬರಹ.ಏನು ಮಾಡೋದಕ್ಕಾಗ್ತದೆ?ಹಾಗೆ ದೇವರು ಬರೆದಿದ್ದ." "ದೇವರು ಅದೇನು ಬರೆದಿದ್ನೋ?" ನೀಳವಾದ ಉಸಿರು,ಹೃದಯದ ನೋವು ಬಾಯಿ ಬಿಟ್ಟಾಗ ಆಗುವ ನರಳಾಟ.ಅವುಗಳ ನಡುವೆ ಮಾತು. ಆ ದಿನವೆಲ್ಲ ಎಷ್ಟೋಂದನ್ನೋ ಅನುಭವಿಸಿ ಚಿರುಕಂಡ ಬಂದಿದ್ದ.ಇಲ್ಲಿ ಆ ಅನುಭವವೆಲ್ಲವನ್ನೂ ಅಣಕಿಸುವ ಹಾಗೆ,ಬೆಟ್ಟದ ಗಾತ್ರ ದುಃಖವೊಂದು ಬಾಯಿ ತೆರೆದು ಗಹಗಹಿಸುತ್ತಿತ್ತು. ....ಚಿರುಕಂಡ ಎಚ್ಚರವಾಗಿಯೇ ಇದ್ದ.ದೀಪವಿರಲಿಲ್ಲ.ಮಲಗಿದ್ದರು ನಿಜ.ಆದರೂ ಚಿರುಕಂಡನ ತಂದೆ ತಾಯಿ ಇಳಿಸ್ವರದಲ್ಲಿ ಮಾತುಕತೆ ನಡೆಸಿಯೇ ಇದ್ದರು.ಗಟ್ಟಿಯಾಗಿ ಉಸಿರು ಬಿಡದೆ,ಅತ್ತಿತ್ತ ಮಿಸುಕದೆ,ಆತ ಅದನ್ನು ಕೇಳುತ್ತಲೇ ಇದ್ದ.

ಮಾರನೆ ದಿನ ಚಿರುಕಂಡ ಅಪ್ಪುವನ್ನು ಹುಡುಕಿಕೊಂಡು ಹೊಲಕ್ಕೆ ಬಂದಾಗ ಮಧ್ಯಾಹ್ನವಾಗಿತ್ತು.ಸ್ನೇಹಿತನನ್ನು ಬೆಳಗಿನಿಂದೆಲ್ಲ ಇದಿರು ನೋಡುತ್ತಲೇ ಇದ್ದ ಅಪ್ಪುವಿಗೆ ಸಂತೋಷವಾಯಿತು.