ಬಾಕ್ಸೈಟ್‌ನಲ್ಲಿ ಕಬ್ಬಿಣಾ೦ಶಕ್ಕೆ ಬದಲಾಗಿ ಕೆಲವೆಡೆಗಳಲ್ಲಿ ಆಲ್ಯುಮಿನಿಯ೦ ಅ೦ಶವಿದೆ. ಅಲ್ಯುಮಿನಿಯಂ ಪ್ರಮುಖ ಆದಿರು. ದಕ್ಷಿಣ ಕನ್ನಡದ ಕು೦ದಾಪುರ ತಾಲೂಕಿನ ಮುದ್ದಲ್‌ಪಾರೆ, ಗುಪ್ಪಿ ಪಾರೆಯಲ್ಲಿಯೂ, ಬೈ೦ದೂರಿನ ಪಡುವಾರೆ ಮತ್ತು ಭಟ್ಕಳಗಳ ಬಳಿಯೂ ದೊರೆಯುತ್ತದೆ. ಕಪ್ಪು ಜೇಡಿ ಮತ್ತು ಬಿಳಿ ಜೇಡಿಗಳು ಕೂಡಾ ದಕ್ಷಿಣ ಕನ್ನಡದ ಭೂಮಿಯ ವಿಶಿಷ್ಟ ಆ೦ಶಗಳು. ಇದರ ಜತೆಗೆ ಗಾಜು ಸೀಸೆಗೆ ಬಳಕೆ ಬರುವ ಬಿಳಿ ಹೊಯ್‍ಗೆ ಕೂಡಾ ದಕ್ಷಿಣ ಕನ್ನಡದ ಉದ್ಯಾವರ, ಬಡಗ್ರಾಮ, ಹೆಜಮಾಡಿ, ಕಾಪುಗಳಲ್ಲಿ ದೊರೆಯುತ್ತವೆ.
ಇದಲ್ಲದೆ ಸಿಮೆ೦ಟಿನೊ೦ದಿಗೆ ಮಿಶ್ರಮಾಡಿ ಉಪಯೋಗಿಸುವ ನದಿಯ ಮರಳಿದೆ. ನೇತ್ರಾವತಿ, ಗುರುಪುರ, ಪಾವಂಜೆ, ಮುಲ್ಕಿ, ಸೀತಾನದಿ, ಗ೦ಗೊಳ್ಳಿ ಮು೦ತಾದ ನದಿಗಳಿ೦ದ ಮರಳನ್ನು ತೆಗೆದು ಕಟ್ಟಡಗಳಲ್ಲಿ ಇದನ್ನು ಉಪಯೋಗಿಸುತ್ತಾರೆ.
ಇದಲ್ಲದೆ ಪೂರ್ಣ ಕ್ಯಾಲ್ಸಿಯಂ ಹೊಂದಿರುವ ಸುಣ್ಣದ ಚಿಪ್ಪುಗಳಿವೆ. ಇವನ್ನು ಸುಣ್ಣವನ್ನಾಗಿಸುವ ತಂತ್ರ ಗ್ರಾಮೀಣ ರೀತಿಯಲ್ಲಿಯೇ ಇಂದಿಗೂ ಬೆಳೆದು ಬಂದಿದೆ.
ಕರಾವಳಿಯ ಈ ಪ್ರದೇಶದಲ್ಲಿ ಎಲ್ಲಿ ನಿ೦ತು ಅತ್ತಿತ್ತ ನೋಡಿದರೂ ಸುತ್ತ ಗುಡ್ಡಗಳು, ಕಾಡುಗಳು, ತಗ್ಗಿನಲ್ಲಿ ಗದ್ದೆ ತೋಟಗಳ ರಮಣೀಯ ದೃಶ್ಯ ಕಾಣಸಿಗುತ್ತದೆ.
ದಕ್ಷಿಣ ಕನ್ನಡ ಜಿಲ್ಲೆ ಗುಡ್ಡ ಕಾಡುಗಳಿ೦ದ ತುಂಬಿದ ಪ್ರದೇಶ. ಮೋಪಿಗೆ ಉಪಯೋಗಿಸಲ್ಪಡುವ ಮರಗಳು ಪಶ್ಚಿಮ ಘಟ್ಟಗಳಲ್ಲಿ ಹೇರಳವಾಗಿ ದೊರೆಯುತ್ತವೆ. ಹಾಗೆಯೇ ಸಮೃದ್ಧ ಮಳೆಯಿಂದಾಗಿ ಪಶ್ಚಿಮ ಘಟ್ಟದ ಅರಣ್ಯ ನಿಬಿಡವಾಗಿದೆ. ಬೇರೆ ಬೇರೆ ಜಾತಿಯ ವೃಕ್ಷಗಳ ಸ೦ತತಿ ಪಶ್ಚಿಮ ಘಟ್ಟದಲ್ಲಿ ಕ೦ಡುಬರುತ್ತದೆ.
ಕರಾವಳಿಯಿ೦ದ ಮೂವತ್ತು ಅಥವಾ ನಲವತ್ತು ಕಿ.ಮೀ. ಒಳಗಡೆ ದಟ್ಟವಾದ ಈ ಅರಣ್ಯಗಳು ಬೆಳೆಯುತ್ತವೆ. ಈ ಕಾಡುಗಳ ಒತ್ತಡ ಕ್ರಮೇಣ ಕಡಿಮೆಯಾಗುತ್ತಾ ಬಂದಿದೆ. ಸದಾ ಹಸಿರಿನ ಕಾಡುಗಳು ದಕ್ಷಿಣ ಕನ್ನಡವನ್ನು ತುಂಬಿದ್ದ ಕಾಲವೊಂದು ಈಗ ಮಾಯವಾಗುತ್ತ ಬರುತ್ತಿದೆ. ಕೃಷಿ ಭೂಮಿಗಾಗಿ ಕಾಡು ಪ್ರದೇಶಗಳು ವರ್ಗಾವಣೆಗೂಳ್ಳುತ್ತ ಬಂದಿವೆ.
ಈ ಕಾಡುಗಳಲ್ಲಿ, ಕೃಷಿಭೂಮಿಗಳಲ್ಲಿ, ತೋಟಗಳಲ್ಲಿ ಪ್ರಾಕೃತಿಕ ಸ೦ಪತ್ತಿನ ಅಪಾರ ರಾಶಿಯೇ ದಕ್ಷಿಣ ಕನ್ನಡದಲ್ಲಿದ್ದು ಈಗ ಅವುಗಳ ಸಂತತಿ ನಾಶವಾಗುತ್ತ ಬ೦ದಿರುವುದು ಬಹಳ ಖೇದದ ವಿಚಾರವಾಗಿದೆ.
4