ಈ ಪುಟವನ್ನು ಪ್ರಕಟಿಸಲಾಗಿದೆ

ಇನ್ಸ್ಪೆಕ್ಟರು ತನಿಖೆಗೆ ಬಂದಾಗ ಜಯದೇವ ಎರಡನೆ ತರಗತಿಗೆ ಪಾಠ ಮಾಡುತಿದ್ದ, ಇನ್ಸ್ಪೆಕ್ಟರು ವಿದ್ಯಾರ್ಥಿಗಳ ಬಳಿಯಲ್ಲೆ ಜಾಗ ಮಾಡಿ ಕುಳಿತರು, ಅವರು ಅಲ್ಲಿದ್ದರೆಂಬ ಗಮನವೇ ಇಲ್ಲದಂತೆ ಜಯದೇವ ಪಾಠ ಮಾಡಿದ. ಗಂಟೆ ಬಾರಿಸಿ ಪಾಠ ಮುಗಿದು ವಿದ್ಯಾರ್ಥಿಗಳು ಎದು ನಿಂತಂತೆ ರಾಧಾಕೃಷ್ಣಯ್ಯನೂ ಅವರಲ್ಲಿ ಒಬ್ಬರಾಗಿ ಎದ್ದು ನಿಂತರು. ಅವರು ಬಂದು ಜಯದೇವನ ಕೈಯನ್ನೇನೂ ಕುಲುಕಲಿಲ್ಲ, ಆದರೆ ಜಯದೇವ ಆವರೆಗೂ ಕಾಣದೇ ಇದ್ದ ಮುಗುಳುನಗೆಯೊಂದು ಅವರ ತುಟಿಗಳ ಮೇಲೆ ಮೂಡಿತ್ತು.

ನಂಜುಂಡಯ್ಯ ಹೇಳಿದ್ದಂತೆಯೇ ರಾಧಾಕೃಷ್ಣಯ್ಯ ಶಾಲೆಯಲ್ಲೇ ಉಳಿದರು. ತಮ್ಮ ವೆಚ್ಚವನು ತಾವೇ ನಿರ್ವಹಿಸಿಕೊಂಡರು, ಜವಾನನೇ ಅವರ ಊಟ ಉಪಚಾರಗಳನ್ನು ಮಾಡಿದ.

ಹಳೆಅಯ ಹುಲಿ ವೆಂಕಟರಾಯರಿಗೆ ರಾಧಾಕೃಷ್ಣಯ್ಯ ಯಾವ ಜನವೆಂದು ಜವಾನನನ್ನು ಕೇಳಿ ತಿಳಿಯುವುದು ಕಷ್ಟವಾಗಲಿಲ್ಲ. ತಮ್ಮವರಲ್ಲವೆಂದು ಗೊತ್ತಾದ ಮೇಲೆ, ಮತ್ತಷ್ಟು ಹೆಚ್ಚು ಎಚ್ಚರಿಕೆಯಿಂದ ಅವರು ವರ್ತಿಸಿದರು.

ಮುಖ್ಯೋಪಾಧ್ಯಾಯರು ರಾಧಾಕೃಷ್ಣಯ್ಯನನ್ನು ಬಿಟ್ಟೇ ಇರಲಿಲ್ಲ. ಆದರೂ ಒಮ್ಮೆ, ವೆಂಕಟರಾಯರು ಮತ್ತು ನಂಜುಂಡಯ್ಯ ಇಲ್ಲದ ಹೊತ್ತು ನೋಡಿ, ಜಯದೇವನನ್ನು ಇನ್ಸ್ಪೆಕ್ಟರರು ಸಮೀಪಕ್ಕೆ ಕರೆದರು. '

“ಇದೇ ಮೊದಲ್ನೇ ವರ್ಷವೇನು?”

“ಹೌದು ಸಾರ್."

ಜಯದೇವ ನಿಂತೇ ಇದ್ದ. ರಾಧಾಕೃಷ್ಣಯ್ಯನೆಂದರು.

“ಆ ಕುರ್ಚಿ ಎಳಕೊಂಡು ಕೂತೊಳ್ಳಿ.”

ಜಯದೇವ ಹಾಗೆ ಮಾಡಿದ. ಮಾತು ಬೆಳೆಯಿತು. ಒಂದೊಂದಾಗಿ ಜಯದೇವನ ವಿಚಾರಗಳನ್ನೆಲ್ಲ ಅವರು ಕೇಳಿ ತಿಳಿದರು.

“ನೀವು ಯಾಕೆ ಕೋರ್ಸ್ ಪೂರ್ತಿ ಮಾಡ್ಲಿಲ್ಲ?”

“ಪರಿಸ್ಮಿತಿ ಸರಿಯಾಗಿದ್ದಿಲ್ಲ ಸಾರ್.” *

“ನನ್ನ ಕೇಳಿದ್ರೆ ನೀವು ಹ್ಯಾಗಾದ್ರೂ ಮಾಡಿ ಕೋರ್ಸು ಮುಗಿಸ್ಬೇಕು. ಆಮೇಲೆ ಟ್ರೇನಿಂಗೂ ಆಗ್ಲಿ."