ಈ ಪುಟವನ್ನು ಪ್ರಕಟಿಸಲಾಗಿದೆ

“ಮುದ್ದಣ-ಮನೋರಮೆ,” ಎಂದು ತಿಮ್ಮಯ್ಯ ಮೆಲ್ಲನೆ ಅಂದು ನಕ್ಕು ಹೇಳಿದರು: “ನಮ್ಮನೇಲೇನಾದರೂ ನಾಟಕಾಭಿನಯ ಮಾಡಿದ್ರೆ ನನ್ನ ಮನೋರಮಾ ಪರಕೆ ತಗೊಂಡು ಬರ್ತಾಳೆ!”

ಹುಡುಗಿಯರ ನಾಟಕದ ಪಾತ್ರಗಳನ್ನು ಹಂಚುವುದು ಸುಲಭವಾಗಲಿಲ್ಲ. ಇಂದಿರಾ ರಾಧೆಯಾದಳು. ಪುಟ್ಟ ಪ್ರಭಾಮಣಿ ಕೃಷ್ಣನಾದಳು.

ಮತ್ತೆ ಇಂದಿರೆಯ ಸಾಮೀಪ್ಯದ ಸನ್ನಿವೇಶ.......

ಒಂದು ಸಂಜೆ ಸೊಹಾಬ್-ರುಸ್ಸುಂ ಅಭ್ಯಾಸ. ಇನ್ನೊಂದುದಿನ 'ಕೃಷ್ಣಪ್ರೇಮ..' ಆ ಹುಡುಗಿಯರ ನಾಚಿಕೆಯೊ-ಸಂಭ್ರಮವೊ, ಅವರ ನಾಟಕದ ಅಭ್ಯಾಸ ನಡೆದಾಗ ಹುಡುಗರು ಯಾರೂ ಇಣಿಕಿ ನೋಡದಂತೆ ಎಚ್ಚರ ವಹಿಸಿ ಜಯದೇವನಿಗೆ ಸಾಕಾಗುತಿತ್ತು. ನಂಜುಂಡಯ್ಯನಿಗೆ ಅದೊಂದರಲ್ಲೂ ಆಸಕ್ತಿ ಇರಲಿಲ್ಲ. ವೆಂಕಟರಾಯರು ಮಾತ್ರ ಆಗಾಗ್ಗೆ ಬಂದು ಹೋಗುತ್ತಿದ್ದರು. ಸಿದ್ಧತೆಯ ಪ್ರಗತಿಯನ್ನು ನಿರೀಕ್ಷಿಸುವುದಕ್ಕಲ್ಲ – ತನ್ನ ಮೇಲೆ ಕಣ್ಣಿಡುವುದಕ್ಕೆ ಅವರು ಬರುತಿದ್ದರೆಂಬುದನ್ನು ತಿಳಿಯಲು ಜಯದೇವನಿಗೆ ಹೆಚ್ಚು ಹೊತ್ತು ಹಿಡಿಯಲಿಲ್ಲ.

ತಿಮ್ಮಯ್ಯ ಉಪಾಧ್ಯಾಯರು ಮಾತ್ರ ಆಗಾಗ್ಗೆ ಬಂದು ಎರಡು ನಾಟಕಗಳ ಅಭಾಸದಲ್ಲೂ ಜಯದೇವನಿಗೆ ನೆರವಾಗುತ್ತಿದ್ದರು.

ನಾಯಿಕೆ ಇಂದಿರಾ ಜಯದೇವನನ್ನು ಮನೆಗೆ ಕರೆದಳು.

“ನಮ್ಮಮ್ಮ ನಿಮ್ಮನ್ನ ಕರಕೊಂಡು ಬಾ ಅಂದ್ರು ಸಾರ್.” ಜಯದೇವ ಅಂಜುಬುರುಕನಾಗಿರಲಿಲ್ಲ. ಆದರೆ ನಾಳೆಯ ದಿನ ಊರಲ್ಲೆಲ್ಲ ನಡೆಯುವ ಅಪಾರ್ಥ ಕಲ್ಪನೆಯ ಪ್ರಚಾರವನ್ನು ಕಲ್ಪಿಸಿಕೊಂಡು ಆತ ಅಳುಕಿದ. ಅವನು ಉಪಾಯವಾಗಿ ಉತ್ತರ ಕೊಟ್ಟ :

“ಈಗ ಬೇಡವಮ್ಮ, ವಾರ್ಷಿಕೋತ್ಸವವಾದ ಮೇಲೆ ನಿಮ್ಮನೇಲಿ ನಮಗೆಲ್ಲ ಕಾಫಿ ಕೊಟ್ಟೀಯಂತೆ.”

ವಾರ್ಷಿಕೋತ್ಸವದ ನಾಟಕಗಳ ನಿರ್ದೇಶಕನಾದ ಜಯದೇವನ ಜನಪ್ರಿಯತೆ ಬಲುಬೇಗನೆ ಹೆಚ್ಚಿತು.