ಈ ಪುಟವನ್ನು ಪ್ರಕಟಿಸಲಾಗಿದೆ

೧೬

ದಿನಗಳು ಕಳೆದುವು ವರ್ಷದ ಪರೀಕ್ಷೆಗಳಾದುವು. ಮೈಸೂರು ಸಂಸ್ಥಾನದ ಕೊನೆಯ ಲೋವರ್ ಸೆಕೆಂಡರಿ ಪರೀಕ್ಷೆಯೂ ನಡೆದು ಹೋಯಿತು. ಒಂದು ವರ್ಷ ತಾನು ಪಾಠ ಹೇಳಿದ್ದ ಆ ಹುಡುಗರನ್ನು ಕಂಡು ಜಯದೇವನಿಗೆ ಅಭಿಮಾನವೆನಿಸಿತು.

ಬೇಸಗೆಯ ರಜೆ, ಶಾಲೆ ಮುಚ್ಚುವ ದಿನ, ವೆಂಕಟರಾಯರೂ ನಂಜುಂಡಯ್ಯನೂ ಆಫೀಸು ಕೊಠಡಿಯಲ್ಲಿ ಕುಳಿತಿದ್ದರು. ಜಯದೇವ ದೃಢನಡಿಗೆಯಿಂದ ಅಲ್ಲಿಗೆ ಬಂದ. ಆತ, ನಾಜೂಕಾಗಿ ಮಡಸಿದ್ದ ಹಾಳೆಯನ್ನು ವೆಂಕಟರಾಯಯರ ಮೇಜಿನ ಮೇಲಿಟ್ಟ. ನಂಜುಂಡಯ್ಯ ಜಯದೇವನ ಮುಖನೋಡಿದರು. ವೆಂಕಟರಾಯರು ಓದಿ, ಆ ಹಾಳೆಯನ್ನು ನಂಜುಂಡಯ್ಯನಿಗೆ ಕೊಟ್ಟರು. ಜಯದೇವ ಕುಳಿತುಕೊಂಡ.

“ಹುಂ.. ಅಂತೂ ಮೇಲಧಿಕಾರಿಗಳ ವಿಚಾರಣೆ ತಪಿಸ್ಕೊಳ್ಬೇಕೂಂತ ಮಾಡಿದೀರೋ ?”

ರಾಧಾಕೃಷ್ಣಯ್ಯ ತಮ್ಮ ದೂರನ್ನು ಗಮನಿಸದೇ ಇರಬಹುದೆಂಬ ಭಯವಿದ್ದರೂ ವೆಂಕಟರಾಯರು ಹಾಗೆ ಕೇಳಿದರು.

"ಸ್ವಲ್ಪ ವಿನಯವಾಗಿ ಮಾತನಾಡಿ!”

“ಇನ್ನು ಅದನ್ನು ಬೇರೆ ನಿಮ್ಮಿಂದ ಕಲೀಬೇಕೇನು? ಐ. ಸೀ!”.

“ವಿದ್ಯಾಭ್ಯಾಸ ಮುಂದುವರಿಸ್ಬೇಕೂಂತ ಮಾಡಿದೀನಿ. ಅದಕ್ಕೊಸ್ಮರ ಹೊರಡ್ತಾ ಇದೀನಿ. ತೀರ್ಮಾನ ಮಾಡೋರು ತೀರ್ಮಾನ ಮಾಡೋರು ನೀವಲ್ವಲ್ಲ! ಮೇಲಕ್ಕೆ ಕಳಿಸ್ಕೊಡಿ" -

"ಅದು ನನಗೆ ಗೊತ್ತಿದೆ :”

“ಸರಿ ಮತ್ತೆ !”

ನಂಜುಂಡಯ್ಯ ಸಿಗರೇಟು ಹಚ್ಚಿ ಅಂದರು :

“ಬೇರೆ ವಿಷಯವೇನೇ ಇರ್ಲಿ, ವಿದ್ಯಾಭ್ಯಾಸ ಮುಂದುವರಿಸೋಕೆ ನೀವು ಮಾಡಿರೋ ನಿರ್ಧಾರ ಶ್ಲಾಘನೀಯ !”