ಈ ಪುಟವನ್ನು ಪ್ರಕಟಿಸಲಾಗಿದೆ

೧೬೨

ದೂರದ ನಕ್ಷತ್ರ

ಜಯದೇವ ವಿವರಿಸಿದ. ಹುಟ್ಟಿದ ಮಗುವಿನ ವಿಕಾಸವೇ ಅತ್ಯಂತ ಮಹತ್ವದ ಘಟ್ಟ... ಆಗ ಸರಿಯಾಗಿ ಪಾಠಹೇಳಬಲ್ಲವನೇ ವಿದ್ಯಾ ವಿಚಕ್ಷಣ.

“ಏನೋಪ್ಪ ವಿದೂಷಕ ಸ್ಥಾನದಲ್ಲಿರೋ ಉಪಾಧ್ಯಾಯನಿಗೆ ರಾಜಾ ಪಾರ್ಟು ಕೊಡ್ತಿದೀರಿ ನೀವು” ಎಂದರು ತಿಮ್ಮಯ್ಯ, ಆದರೆ ನಗಲಿಲ್ಲ. ಅವರೂ ಯೋಚಿಸುವಂತೆ ತೋರಿತು.

ಯಾವ ದಿನ ಹೊರಡುವುದೆಂಬುದನ್ನು ಜಯದೇವ ಯಾರಿಗೂ ಹೇಳಲಿಲ್ಲ, ತಾನು ಗೊತ್ತುಮಾಡಿದ್ದ ದಿನದ ಹಿಂದಿನ ಸಂಜೆ ಆಕಸ್ಮಿಕವಾಗಿ ಇಂದಿರೆಯ ಮನೆಗೆ ಹೋದ.

“ನಾನು ಈ ಊರಿಂದ ಹೊರಡ್ತೀನಿ. ಹೇಳಿಹೋಗೋಣಾಂತ ಬಂದೆ.”

ಇಂದಿರಾ ಬಾಗಿಲ ಮರೆಯಲ್ಲಿ ಅಡಗಿದಳು. ಆಕೆಯ ತಾಯಿ ಕಾಫಿ ತಂದುಕೊಟ್ಟರು.

“ಕೆಟ್ಟ ಊರು ನಮ್ಮದು. ಇಲ್ಲದ್ದೆಲ್ಲಾ ಕೇಳಿದಿರಿ.”

“ಏನಿಲ್ಲ! ಕೋರ್ಸ್ ಮುಗಿಸಿ ಇಲ್ಲಿಗೇ ವಾಪಸು ಬರಬೇಕೂಂತಿದೀನಿ..”

ಆ ತಾಯಿಗೆ ಅದನ್ನು ನಂಬುವುದೇ ಕಷ್ಟವಾಯಿತು.

“ಆದರೆ ಇನ್ನೊಂದ್ಸಲ ಬರುವಾಗ ಒಬ್ಬನೇ ಬರೋದಿಲ್ಲ!”

ಇಂದಿರಾ ಹೊರಗೆ ಇಣಿಕಿ ನೋಡಿ ಮೆಲ್ಲನೆ ನಕ್ಕಳು. ಆಕೆಯ ಕಣ್ಣು ಗಳು ಹನಿಯೂಡುತಿದ್ದುವು. ಇಂದಿರೆಯ ತಾಯಿ ಹೇಳಿದರು :

'ನಿಮ್ಮ ಕೈ ಹಿಡಿಯೋ ಹುಡುಗಿ ಭಾಗ್ಯವಂತೆ ಇಬ್ಬರೂ ಬಂದಾಗ ನಮ್ಮನೇಗೆ ಊಟಕ್ಕೆ ಬನ್ನಿ"

ಅಲ್ಲಿಂದ ಹೊರಡುತ್ತ ಜಯದೇವ ಕೇಳಿದ:

“ಇಂದಿರೇನ ಮುಂದಕ್ಕೆ ಓದಿಸೊಲ್ವೆ?"

“ಇಲ್ಲೇ ಹೈಸ್ಕೂಲಾದರೆ ಓದಿಸ್ಬೇಕು. ಹೊರಗೆ ಹ್ಯಾಗೆ ಕಳಿಸೋಣ? ನಾವು ಹೆಣ್ಣು ಹೆಂಗಸರು.”

ಜಯರಾಮಶೆಟ್ಟರು ಮನೆಯಲ್ಲಿರಲಿಲ್ಲ, ಅವರಾಕೆ ತುಂಬ ಆದರದಿಂದ ಉಪಚರಿಸಿದಳು. ನಾಗರಾಜ ಅಳುಮೋರೆಯೊಡನೆ ಹೇಳಿದ : -