ಈ ಪುಟವನ್ನು ಪ್ರಕಟಿಸಲಾಗಿದೆ

ಮುಖ, ಜಯದೇವನಿಗೆ ಗುರುತು ಸಿಕ್ಕಿತು; ಆತ ರಂಗರಾಯರತ್ತ ನೋಡಿ ನಕ್ಕ.

ಅಷ್ಟರಲ್ಲಿ ಅವರ ಹೆಂಡತಿ ಕಂಚಿನ ಎರಡು ಲೋಟಗಳಲ್ಲಿ ನಿಂಬೆಹಣ್ಣಿನ ಪಾನಕ ತಂದಿಟ್ಟರು....

... ಜಯದೇವ ಸ್ನಾನಮುಗಿಸಿ ಬಂದ.

ಹಜಾರದಲ್ಲೇ ಮುಖ್ಯೋಪಾಧ್ಯಾಯರೂ. ಜಯದೇವನೂ ಊಟಕ್ಕೆ ಕುಳಿತರು.

ಬಡಿಸುತ್ತ ಸಾವಿತ್ರಮ್ಮ ಗಂಡನನ್ನ ಉದ್ದೇಶಿಸಿ ಕೇಳಿದರು :

“ಮದುವೆ ಆಗಿದೆಯೇ !"

“ಮದುವೆಯಾಗಿ ಮೂರು ಮಕ್ಕಳ ತಾಯಿಯಾದ್ಮೇಲೂ ನನ್ನ ಹೀಗೆ ಕೇಳ್ತೀಯಲ್ಲೆ!”

“ಹೋಗಿ ನಿಮ್ಮನ್ನಲ್ಲ ಕೇಳಿದ್ದು.”

ಗಂಡ ಹೆಂಡಿರ ಹುಸಿಮುನಿಸಿನ ಆ ಸಂವಾದ ಸ್ವಾರಸ್ಯಕರವಾಗಿ ಜಯದೇವನಿಗೆ ತೋರಿತು. ಆತ ನಗುತ್ತ ಹೇಳಿದ:

*ಇನ್ನೂ ಇಲ್ಲವಮ್ಮ.”

ಆ ತಾಯಿ ಕೇಳಿದರು:

“ಬೆಂಗಳೂರೇನ ಊರು ?”

"ಹೂ೦. ಹಾಗೆಂತ್ಲೇ ಅನ್ನಬೇಕು.”

“ಹಾಗಾದರೆ ನಮ್ಮ ರಾಮಣ್ಣನೂ ಸರೋಜಾ ಗಂಡನೂ ನಿಮಗೆ ಗೊತ್ತೋ ಏನೋ ?”

ರಂಗರಾಯರು ನಕ್ಕರು.

“ನೀನೂ ಸರಿ. ಬೆಂಗಳೂರು ನೋಡದವರ ಹಾಗೆ ಮಾತಾಡ್ತಿಯಲ್ಲೇ! ನಿನ್ನ ಮಗ, ಮಗಳು, ಅಳಿಯ ಎಲ್ಲಿದ್ರೂ ಎಲ್ಲರಿಗೂ ಗೊತ್ತಾಗೋ ಮಹಾಪುರುಷರೂಂತ ತಿಳಿಕೊಂಡ್ಯಾ?"

ಸಾವಿತ್ರಮ್ಮನ ಮುಖ ಪೆಚ್ಚಾಯಿತು. ತಾಯಿಯಿಲ್ಲದ ಜಯದೇವ,ಸಾವಿತ್ರಮ್ಮನ ಪಕ್ಷವನ್ನೇ ವಹಿಸಿದ.

“ಗೊತ್ತಾಗದೆ ಏನು? ನಾನೇ ಪರಿಚಯ ಮಾಡಿಕೊಂಡಿಲ್ಲ, ಅಷ್ಟೆ.ಇನ್ನೊಂದ್ಸಲ ಹೋದಾಗ ವಿಳಾಸ ತಗೊಂಡು ಹೋಗ್ತೀನಿ"