ಈ ಪುಟವನ್ನು ಪ್ರಕಟಿಸಲಾಗಿದೆ

ತಮ್ಮ ಮನೆಯ ಬಾಗಿಲ ಮುಂದೆ ನಿಂತು ರಂಗರಾಯರೆಂದರು :

“ಬನ್ನಿ ನಂಜುಂಡಯ್ಯನವರೇ, ಎರಡು ನಿಮಿಷ ಕೂತು ಹೋದರಾಯ್ತು.”

“ಇಲ್ಲ ಇಲ್ಲ, ಆಗಲೇ ಲೇಟಾಯ್ತು. ಹೀಗೇ ಹೊರಡ್ತೀನಿ. ನಾಳೆ ಸಿಗ್ತೀನಿ ಮಿ. ಜಯದೇವ್. ಬೆಳಗ್ಗೆ ಬೇಗ್ನೆ ಬಂದು ಊಟಕ್ಕೆ ಕರಕೊಂಡು ಹೋಗ್ತೀನಿ."

ನಂಜುಂಡಯ್ಯ ಕತ್ತಲೆಯಲ್ಲಿ ಮರೆಯಾದಂತೆ ರಂಗರಾಯರು ಜಯದೇವನೊಡನೆ ತಮ್ಮ ಮನೆಯನ್ನು ಹೊಕ್ಕರು.

ಮಂದವಾದ ವಿದ್ಯುದೀಪ ಮನೆಯ ಹಜಾರವನ್ನು ಬೆಳಗಿತ್ತು.ಬರುತ್ತಿದ್ದ ಸಪ್ಪಳವನ್ನು ದೂರದಿಂದಲೆ ಕೇಳಿದ ಸಾವಿತ್ರಮ್ಮ, ಹೊರಬಾಗಿಲಿನ ಅಗಣಿ ತೆಗೆದು ಅಲ್ಲೆ ನಿಂತಿದ್ದರು.

“ಹೋಟೆಲಿನಿಂದ ಬರ್ತಿದೀರಿ ತಾನೆ? ನಾನಿಲ್ಲಿ ನಿಮಗೇಂತ ಕಾಫಿ ಉಳಿಸ್ಕೊಂಡು ತಿಂಡಿ ಮಾಡಿಟ್ಟು ಕಾದಿರೋದಕ್ಕೂ ನೀವು ಹೀಗ್ಮಾಡೋದಕ್ಕೂ–”

ಅದು ಮನೆಯೊಡತಿಯ ಬೇಸರದ ಧ್ವನಿ.

“ನಾನೇನು ಮಾಡ್ಲೆ? ಹೊಸ ಮೇಷ್ಟ್ರು ಬಂದಿದ್ದಾರೆ, ಕಾಫಿಗೆ ಹೋಗೋಣ ಬನ್ನಿಂತ ನಂಜುಂಡಯ್ಯ ಎಳಕೊಂಡು ಹೋದ್ರು.”

“ನಂಜುಂಡಯ್ನೋ-ಸರಿ, ಸರಿ!”

ಜಯದೇವ ಕೈಕಾಲು ತೊಳೆದು ಬಂದು, ಹಜಾರದಲ್ಲಿ ತನ್ನ ಹಾಸಿಗೆಯ ಮೇಲೆ ಕಾಲು ನೀಡಿ ಕುಳಿತ.

ಈ ಊರಲ್ಲಿ ಆತ ಕಳೆದ ಮೊದಲ ದಿನ ಸಪ್ಪೆಯಾಗಿರಲಿಲ್ಲ ಅಂತೂ!

... ಊಟದ ಶಾಸ್ತ್ರ ಮುಗಿಸುತಿದ್ದಾಗಲೇ ಸಿಡಿಲು ಗುಡುಗುಗಳು ಸದ್ದು ಮಾಡಿದುವು. ಮಿಂಚು ಮಿಂಚಿತು, ಮಳೆ ಸುರಿಯಿತು. ಹಂಚು ಸೋರುತಿದ್ದ ಎರಡು ಕಡೆಗಳಲ್ಲಿ ನೀರು ಹಿಡಿಯಲೆಂದು ಸಾವಿತ್ರಮ್ಮ ಪಾತ್ರೆಗಳನ್ನು ತಂದಿಟ್ಟರು.

...ರಂಗರಾಯರು ಎಲೆ ಅಡಿಕೆ ಹಾಕಿಕೊಂಡರು. ಈ ಅಭ್ಯಾಸವೂ ತನಗಿಲ್ಲವೆಂದ ಜಯದೇವ.