ಈ ಪುಟವನ್ನು ಪ್ರಕಟಿಸಲಾಗಿದೆ

ಬೆರಳಿಂದ ಅದರ ತಲೆಯನ್ನೊಮ್ಮೆ ತಟ್ಟಿ ಮುಚ್ಚಳ ತೆರೆದು ಒಂದು ಚಿಟಿಕೆ ನಶ್ಯವನ್ನು ಮೂಗಿಗೇರಿಸಿ..

ಜಯದೇವನಿಗೆ ನಗು ತಡೆಯಲಿಲ್ಲ, ಕಣ್ಣ ಮುಂದೆ ಕಟ್ಟಿದ ಆ ಚಿತ್ರ ಕಾಲ್ಪನಿಕವಾಗಿರಲಿಲ್ಲ. ಕಾನಕಾನಹಳ್ಳಿಯ ಮಾಧ್ಯಮಿಕ ಶಾಲೆಯಲ್ಲಿ ಆ ಉಪಾಧಾಯರಿದ್ದರು. ತಾನೂ ಹಾಗೆಯೇ–

ನಶ್ಯದ ಗುರುದಕ್ಷಿಣೆಯ ಪ್ರಸ್ತಾಪ ಕೇಳಿ ಜಯದೇವ ನಗುತಿದ್ದಾನೆಂದು ನಂಜುಂಡಂಯ್ಯನೂ ನಕ್ಕರು.

ಅವರು ಕೈಗಡಿಯಾರ ನೋಡಿದರು.

“ಹತ್ತೂಕಾಲು ಈಗ, ಹತ್ತೂವರೆಗೆ ಹೊರಟು ಬಿಡೋಣ.”

“ಹೂಂ, ಪಾಠ ಗೊತ್ತುಮಾಡೋದಕ್ಕಿದೆಯಲ್ಲ, ಐದು ನಿಮಿಷ ಮೊದಲೇ ಬಂದ್ಬಿಡೀಂತ ಮುಖ್ಯೋಪಾಧ್ಯಾಯರು ಹೇಳಿದ್ರು”

“ರಂಗರಾಯರು? ನೀವೇನೂ ಯೋಚಿಸ್ಬೇಡಿ, ಟೈಂ ಟೇಬಲ್ ಮೊದಲೇ ಮಾಡಿ ಇಟ್ಟಿರ್ತಾರೆ. ನಾವು ಹೋದ ತಕ್ಷಣ ಮುಂದೆ ಇಟ್ಟು ನಮ್ಮಿಂದ ಸರಿ ಅನ್ನಿಸ್ಕೊಳ್ತಾರೆ ! ನಿಮಗಿನ್ನೂ ಅವರ ಪರಿಚಯ ಇಲ್ಲ. ಅವರು ಹಳೇ ಕಾಲದ ಮೆಟ್ರಿಕುಲೇಟ್ ಜಯದೇವ್, ಸಾಮಾನ್ಯ ಅಂತ ತಿಳಕೋಬೇಡಿ!"

ನಂಜುಂಡಯ್ಯ ನಗುತ್ತ ಹಾಗೆ ಅಂದಿದ್ದರೂ ಅದು ತಮಾಷೆಯ ಮಾತಷ್ಟೇ ಆಗಿರಲಿಲ್ಲ, ಆ ಸ್ವರದೊಡನೆ ಸೂಕ್ಷ್ಮವಾಗಿ ಬೆರೆತಿದ್ದ ಅಸಹನೆಯನ್ನು ಜಯದೇವ ಗುರುತಿಸಿದ. ರಂಗರಾಯರೂ ನಂಜುಂಡಯ್ಯನವರೂ ಅನ್ನೋನ್ಯವಾಗಿಲ್ಲವೆಂಬುದಷ್ಟು ಆ ಮಾತಿನಿಂದ ಸ್ಪಷ್ಟವಾಯಿತು. ಅಥವಾ ತಾನೇ ಹಾಗೆಂದು ತಪ್ಪು ತಿಳಿದಿರಬಹುದು: ರಂಗರಾಯರನ್ನು ಅವರು ಹೊಗಳುವುದರಲ್ಲಿ ಕೊಂಕು ಎಲ್ಲಿಯದು?-ಎಂದೂ ಒಂದು ಕ್ಷಣ ಜಯದೇವ ಯೋಚಿಸಿದ.

ಆದರೆ ನಂಜುಂಡಯ್ಯನ ಮುಂದಿನ ಪ್ರಶ್ನೆ, ಅಂತಹ ಯೋಚನೆ ಅನವಶ್ಯವೆಂದು ಸಾರಿತು.

*ರಂಗರಾಯರು ಏನಾದರೂ ಅಂದ್ರಾ ಜಯದೇವ್?”

ಜಯದೇವ ಯಾಕೋ ಇದೆಲ್ಲಾ ಸರಿಯಾಗಿಲ್ಲಾ ಎಂದುಕೊಂಡರೂ,ಆವನ ಕುತೂಹಲ ಕೆರಳಿತು.