ಈ ಪುಟವನ್ನು ಪ್ರಕಟಿಸಲಾಗಿದೆ

ಕೃಷ್ಣಪ್ಪನಾಯಕನು ಪುರಂದರ ದಾಸರಾದ ಬಗೆ... ದಾಸ ಪರಂಪರೆ ...ದಾಸ ಕೂಟ... -

ಅದು ಕನ್ನಡನಾಡಿನ ಗತ ಇತಿಹಾಸದೊಂದು ಉಜ್ವಲ ಅಧ್ಯಾಯ. ಎಷ್ಟೊಂದು ಅರ್ಥಪೂರ್ಣವಾಗಿತ್ತು ಆ ಪಾಠ ! ಆದರೆ ಆ ಹುಡುಗರು? ಆ ವಿದ್ಯಾರ್ಥಿಗಳೆಲ್ಲ ಒಮ್ಮೆ ಓದುತ್ತಿದ್ದವನ ಮುಖವನ್ನೂ, ಮತ್ತೊಮ್ಮೆ ಮುಗುಳ್ನಗುತ್ತ ತಲೆದೂಗುತ್ತ ಕುಳಿತಿದ್ದ ಜಯದೇವನ ಮುಖವನ್ನೂ ನೋಡುತ್ತಲಿದ್ದರು. ಪಾಠದ, ವಿಷಯವೇನೆಂಬುದರ ಬಗೆಗೆ ಹುಡುಗರಲ್ಲಿ ಹೆಚ್ಚಿನವರಿಗೆ ಆಸಕ್ತಿಯೇ ಇದ್ದಂತೆ ತೋರಲಿಲ್ಲ!

ಆ ಪರಿಸ್ಮಿತಿಗೆ ಅವಕಾಶ ಕೊಡಬಾರದೆಂದು ಜಯದೇವ, ಓದು ಮುಗಿದೊಡನೆ, ಪುರಂದರದಾಸರ ಜೀವನವನ್ನು ತಾನೇ ತನ್ನ ಮಾತುಗಳಲ್ಲೇ ಕಥೆಯ ರೂಪದಲ್ಲಿ ತಿಳಿಸಿದ. ಆ ಕಥನಕ್ರಮ ಸಾರಸ್ಯಕರ ವಾಗಿತ್ತು, ಹುಡುಗರು ತದೇಕಚಿತ್ತರಾಗಿ ಕೇಳಿದರು. ಗಂಟೆ ಬಾರಿಸಿದರೂ ಪಾಠ ನಿಲ್ಲಲಿಲ್ಲ... ನಂಜುಂಡಯ್ಯ ಬಗಿಲಬಳಿ ಸುಳಿದ ಹಾಗಾಯ್ತು. ಜಯದೇವ ಒಮ್ಮೆಲೆ ಕಥೆ ನಿಲ್ಲಿಸಿದ... ಹೊತ್ತು ಮಿಾರಿದ್ದ ಹಾಗೆ ತೋರಿತು. ಮನಸ್ಸಿಲ್ಲದ ಮನಸಿನಿಂದ ಒಬ್ಬ ಹುಡುಗನೆಂದ:

“ಬೆಲ್ಲಾಯ್ತು, ಸಾರ್.”

"ಓ ಹೌದೆ?'

ಇನ್ನೊಬ್ಬ ಹುಡುಗ ಕೇಳಿದ :

“ಮುಂದೆ ಪುರಂದರದಾಸರೇನ್ಮಾಡಿದರು ಸಾರ್?”

“ನಾಳೆ ಹೇಳ್ತೀನಿ-ನಾಳೆ.”

“ಆ ಮೇಲೆ ಭೂಗೋಳಕ್ಕೆ ಬಲ್ತಿರಲಾ ಸಾರ್, ಆಗ ಹೇಳಿ.”

“ಛೆ-ಛೆ? ಭೂಗೋಳದ ಪೀರಿಯಡಿನಲ್ಲಿ ಭೂಗೋಳ!”

ಜಯದೇವ ಹಾಗೆ ನಕ್ಕು ನುಡಿದು ಪುಸ್ತಕವನ್ನೆತ್ತಿಕೊಂಡು ಹೊರ ಬಂದ.

ಗಂಭೀರ ಮುಖ ಮುದ್ರೆಯೊಡನೆ ಜಗಲಿಯಲ್ಲಿ ನಿಂತಿದ್ದ ನಂಜುಂಡಯ್ಯ, ಜಯದೇವನನ್ನು ನೋಡಿ ಮುಗುಳ್ಳಕ್ಕರು.

“ಪಾಠ ಚೆನ್ನಾಗಿ ನಡೀತೂಂತ ಕಾಣುತ್ತೆ.”

“ಏನೋ ಕತೆ ಹೇಳ್ದೆ ಸಾರ್.”