ಈ ಪುಟವನ್ನು ಪ್ರಕಟಿಸಲಾಗಿದೆ

ಹುಡುಗರು ವಿಶೇಷ ಆಸಕ್ತಿಯನ್ನೇನೂ ತೋರುತ್ತಿರಲಿಲ್ಲ. ಜಯದೇವ ಹುಡುಗರ ನಡುವೆ ತಮಗಿಂತ ಹೆಚ್ಚು ಜನಪ್ರಿಯನಾಗುವನೆಂಬುದು ಸ್ಪಷ್ಟವಾಗಿತ್ತು, ಅದನ್ನು ಅವರು ಸಹಿಸಿಕೊಂಡರು.

“ಯಾವ ಪಾಠ ಮಾಡಿದಿರಿ ?'

“ಆದರ್ಶ ಮಹಿಳಾರತ್ನಗಳು.”

“ಮೊದಲನೇ ಪಾಠ ಪೂರ್ತಿ ಮಾಡಿದ್ರೇನೊ?”

“ಇಲ್ಲ, ಪಾಠ ಇನ್ನೂ ಷುರು ಮಾಡಿಲ್ಲ.”

“ಮತ್ತೆ !”

“ಮುಂದಿನ ಪಾಠಕ್ಕೆ ಪೀಠಿಕೆ ಅಂತ ಸಾಮಾನ್ಯ ವಿವರಣೆ ಕೊಟ್ಟೆ.”

“ಲೆಕ್ಟರು ಅನ್ನಿ!"

“ಒ೦ದು ರೀತೀಲಿ ಹಾಗೆಯೇ.”

“ಅದರಿಂದೆಲ್ಲಾ ಏನು ಪ್ರಯೋಜನ ಇವರೆ?

“ಯಾಕ್ಸಾರ್? ಹೇಳೋದು ಸಾರಸ್ಯವಾಗಿದ್ರೆ ಹುಡುಗರು ಕೇಳ್ತಾರೆ.”

ಇತರ ಉಪಾಧ್ಯಾಯರಿಗೆ ಸಾರಸ್ಯಪೂರ್ಣವಾಗಿ ಹೇಳಲು ಬರುವುದಿಲ್ಲವೆಂಬುದನ್ನು ಜಯದೇವ ಸೂಚ್ಯವಾಗಿ ತಿಳಿಸಿದ ಹಾಗಾಯಿತೆ೦ದು ನಂಜುಂಡಯ್ಯ ಭಾವಿಸಿದರು.

ಅವರ ಹುಬ್ಬುಗಂಟಿಕ್ಕಿತು. ಸಿಗರೇಟನ್ನು ತುಟಿಗಳ ನಡುವೆ ಸಿಕ್ಕಿಸಿಕೊಂಡು ಅವರು ಕಡ್ಡಿಗೀರಿದರು,

* ಕೇಳದೆ ಏನು? ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಹೊರಕ್ಬಿಡ್ತಾರೆ.”

“ಅಷ್ಟೇ ಅಂತೀರಾ?

“ಅಲ್ದೆ ಇನ್ನೇನು? ನನ್ನ ಕೇಳಿದರೆ, ಆಚರಣೆಯಲ್ಲಿರೋ ಪದ್ದತೀನೇ ನೀವು ಅನುಸರಿಸಿದ್ರೆ ಮೇಲು.”

“ಪಾಠ ಹೇಳ್ಕೊಡೋ ವಿಷಯ ಮಾತಾಡ್ತಿದೀರಾ?” –ಎಂದು ಕೇಳುತ್ತಲೆ ರಂಗರಾಯರು ಒಳ ಬಂದರು.

ಮುಖ ಸಪ್ಪಗೆ ಮಾಡಿಕೊಂಡು ಜಯದೇವ ಹೇಳಿದ;

"ಹೌದು ಸಾರ್."