ಈ ಪುಟವನ್ನು ಪ್ರಕಟಿಸಲಾಗಿದೆ

ಜಯದೇವನಿಗೆ ಏನೂ ಹೊಳೆಯಲಿಲ್ಲ, ಆದರೂ ಗಂಭೀರವಾದುದೇನೊ ಇದೆ ಎಂದು ಅವನ ಮನಸ್ಸು ಮಿಡುಕಿತು.

ಆಫೀಸು ಕೊಠಡಿಯತ್ತ ಹೋಗುತಿದ್ದ ನಂಜುಂಡಯ್ಯ ಅಲ್ಲೆ ತಡೆದು ನಿಂತು ಬಂದವರನ್ನು ಇದಿರ್ಗೊಂಡರು.

ಮೊದಲು ಮಾತನಾಡಿದವರು ಆ ವ್ಯಕ್ತಿಯೇ.

“ಇಲ್ಲಿ ಎಚ್. ಎಂ. ರಂಗರಾಯರು ಯಾರು?”

ರಂಗರಾಯರೇ ಅಷ್ಟರಲ್ಲಿ ಅಲ್ಲಿಗೆ ಬಂದರು

“ಬನ್ನಿ, ನಾನು... ಬನ್ನಿ, ಬೇರೆ ಊರಿಂದ ಬಂದ ಹಾಗಿದೆ.”

ಬಂದವರು ಮಾತನಾಡಲಿಲ್ಲ, ಮೂವರು ಉಪಾಧ್ಯಾಯರೊಡನೆ ಅವರು ಕೊಠಡಿಯೊಳಕ್ಕೆ ಹೋಗಿ ಕುಳಿತರು: ಬಂದ ಹೊಸಬರನ್ನು ನೋಡಲು ಬಾಗಿಲಬಳಿ ಹುಡುಗರು ಗುಂಪು ಕೂಡದೇ ಇರಲಿಲ್ಲ, ಬಂದವರು ಹುಡುಗರತ್ತ ವ್ಯಗ್ರ ದೃಷ್ಟಿಯನ್ನು ಬೀರಿ ಹುಬ್ಬು ಗಂಟಿಕ್ಕಿದರು--'ಇದು ಶಿಷ್ಟ ಸಂಪ್ರದಾಯವಲ್ಲ'ವೆಂಬಂತೆ.

ರಂಗರಾಯರು ಹುಡುಗರನ್ನು 'ಆಚೆಗೆ ಹೋಗಿ!” ಎಂದು ಬೆದರಿಸಬೇಕಾಯಿತು.

ಬಂದವರು ಹೇಳಿದರು :

"ನಿಮಗೆ ನನ್ನ ಪರಿಚಯವಿಲ್ಲ.”

ಅದು ಸ್ಪಷ್ಟವಾಗಿತ್ತು, ಹಾಗೆಂದು ತಿಳಿಯಪಡಿಸುವ ಅವಶ್ಯಕತೆಯೂ ಇದ್ದಂತೆ ಜಯದೇವನಿಗೆ ತೋರಲಿಲ್ಲ. ನಂಜುಂಡಯ್ಯ ಮೌನವಾಗಿಯೇ ಇದ್ದರು. ಸಿಗರೇಟನ್ನು ಹೊರತೆಗೆಯಲಿಲ್ಲ ಮಾತ್ರ.

"ನಿಜ, ಪರಿಚಯವಿಲ್ಲ” ಎಂದರು ರಂಗರಾಯರು, ಮುಗುಳ್ನಗಲು ಯತ್ನಿಸುತ್ತಾ,"

“ನನ್ನ ಹೆಸರು ವೆಂಕಟರಾವ್” ಎಂದರು ಹೊಸಬರು. ವೆಂಕಟರಾವ್ ಯಾರೆಂಬುದನ್ನು ವಿವರಿಸಲಿಲ್ಲ, ಅವರು ತಮ್ಮ ಉಣ್ಣೆಯ ಕೋಟನ ಒಳ ಜೇಬಿಗೆ ಕೈ ಹಾಕಿ ಉದ್ದನೆಯ ಲಕ್ಕೋಟೆಯೊಂದನ್ನು ಹೊರತೆಗೆದರು. ಫೂ ಎಂದು ಊದಿ ಲಕ್ಕೋಟೆಯ ಬಾಯಗಲಿಸಿ ಗುಂಡು ಸೂಜಿ ಚುಚ್ಚಿದ್ದ ಎರಡು ಹಾಳೆಗಳನ್ನು ಬೆರಳುಗಳಿಂದೆತ್ತಿ ರಂಗರಾಯರಿಗೆ ಕೊಟ್ಟರು.