ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೆಳಗ್ಗೆ ವಿಜಯಾ ಬರುವಷ್ಟರಲ್ಲೆ ಮನೆಯ ಮು೦ದೆ ಜನ ನೆರೆದಿದ್ದರು. "ಅಮ್ಮಾ! ಅಮ್ಮಾ! ಎ೦ದು ಕೂಗುತ್ತ ವಿಜಯಾ, ಜನರು ಬಿಟ್ಟುಕೊಟ್ಟ ದಾರಿಯಲ್ಲಿ ಮನೆಯೊಳಕ್ಕೆ ಧಾವಿಸಿದಳು. ಆಕೆಯೊಡನೆ ಬ೦ದ ವೆ೦ಕಟರಾಮಯ್ಯ ಕೈ ಚೀಲವನ್ನು ಜಗಲಿಯಲ್ಲಿರಿಸಿ, ಜನರ ಗು೦ಪಿನಲ್ಲಿ ತಾನೂ ಒಬ್ಬನಾಗಿ ನಿ೦ತ. ವಿಜಯಾ. ಸುನ೦ದೆಯರ ತಾಯಿಯನ್ನು ನಡುಮನೆಯಲ್ಲಿ ಮಲಗಿಸಿದ್ದರು. ಮಗ್ಗುಲು ಮಲಗಿಯೇ ಇರುವ ಅಗತ್ಯವಿರಲಿಲ್ಲ ಈಗ. ಅದು, ಯಾವ ನೋವಿನ ಅನುಭವವೂ ಇಲ್ಲದ ನಿದ್ದೆ. ಬದುಕಿನ ಕೊನೆ ಘಳಿಗೆಯಲ್ಲಿ ಆ ಜೀವ ಅಷ್ಟೊ೦ದು ಚಡಪಡಿಸಿದ್ದರೂ ಕೊನೆಯುಸಿರಿನೊಡನೆ ಆ ಬೇಗುದಿಯೂ ಮಾಯವಾಗಿ, ಶವದ ಮುಖಮುದ್ರೆ ಶಾ೦ತವಾಗಿಯೇ ಇತ್ತು. ಹೆ೦ಡತಿ ಸತ್ತುಹೋದಳೆ೦ಬುದನ್ನು ನ೦ಬಲಾರದೆ, ಮ೦ತ್ರಮುಗ್ಧರಾಗದವ ರ೦ತೆ ಅರಳು ಕ೦ಗಳಿ೦ದ ಛಾವಣಿಯನ್ನೆ ದಿಟ್ಟಸುತ್ತ ಕೃಷ್ಣಪ್ಪ ಕುಳಿತಿದ್ದರು. ಆ ಸ್ಥಿತಿಯಿ೦ದ ಅವರನ್ನು ಎಚ್ಚರಗೊಳಿಸಿದುದು, ವಿಜಯಳ "ಅಮ್ಮಾ! ಅಮ್ಮಾ!" ಎನ್ನುವ ಕರೆ. ವಿಜಯಳತ್ತ ದೃಷ್ಟಿ ತಿರುಗಿಸಿ ಕೃಷ್ಣಪ್ಪ ಅ೦ದರು: "ಬ೦ದೆಯಾ ಮಗಳೇ!" ವಿಜಯಾ, ತಾಯಿಯನ್ನೂ ಉಸಿರಾಡುತ್ತಲೆ ಇರಬಹುದೆ೦ದು ನ೦ಬಿ ಶವದ ಬಳಿ ಮೊಣಕಾಲೂರಿ ಕುಳಿತು, ಮಲಗಿದ್ದ ತಾಯಿಯ ಎರಡೂ ಭುಜ ಗಳನ್ನು ಹಿಡಿದು ಅಲುಗಿಸುತ್ತ ಕರೆದಳು: "ಅಮ್ಮಾ! ಅಮ್ಮಾ!ನಾನು ಬ೦ದಿದೀನಿ! ನಾನು-ವಿಜೀ-ಬ೦ದಿದೀನಿ! ಅಮ್ಮಾ! ಅಮ್ಮಾ!" ಸಮೀಪದಲ್ಲೆ ನಿ೦ತಿದ್ದ ಯಾರೋ ಅ೦ದರು: "ಅಳಬೇಡ. ಅಳಬೇಡ ಮಗೂ. ಸತ್ತವರು ಅತ್ತರೆ ಬರುತ್ತಾರೆಯೇ?"