ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೪ ಏಕಾಂಗಿನಿ ಕತ್ತಿಗೆ ಜೋತು ಬಿದ್ದು ರೋದಿಸಿದಳು; “ಅಕ್ಕಾ! ಅಕ್ಕಾ!” “ಅಳಬೇಡ ವಿಜೀ....” "ನಾನು ಪಾಪಿ ಅಕ್ಕಾ! ಅಮ್ಮನನ್ನ ನೋಡೋ ಭಾಗ್ಯ ನನಗಿಲ್ದೆ ಹೋಯ್ತು!” ಆಗ ಸುನಂದೆಯೂ ಅತ್ತಳು, “ಅದು ನನ್ನ ತಪ್ಪು ವಿಜೀ. ಮೊದಲೇ ನಿ೦ಗೆ ಬರೀದೆ ನಾನು ತಪ್ಪು ಮಾಡ್ದೆ!” ವಿಜಯಾ ಒಪ್ಪಲಿಲ್ಲ. “ಇಲ್ಲ ಅಕ್ಕಾ. ನಾನು ಪಾಪಿ!” ನೆರೆಹೊರೆಯ ಹೆಂಗಸರು ಒಳಕ್ಕೆ ಬಂದು, ವಿಜಯಾ-ಸುನಂದೆಯರ ಹಿಂದೆ ನಿಂತುರು. ಅಷ್ಟು ವರ್ಷ ಪಕ್ಕದ ಮನೆಯವಳಾಗಿದ್ದು ತಮ್ಮನ್ನು ಬಿಟ್ಟು ಹೋದ ಜೀವವನ್ನು ನೋಡುತ್ತಾ ಒಬ್ಬೊಬ್ಬರೂ ಸ್ವಲ್ಪ ಸ್ವಲ್ಪ ಅತ್ತರು. ನಿಂತವರೆಡೆಯಿಂದ ಮಾರುಗಳು ಕೇಳುತಿದ್ದುವು. “ಆಗಲೆ ಒಂಭತ್ತು ದಾಟಿ ಹೋಯ್ತು." “ಇನ್ನು ಯಾರೂ ಬರಬೇಕಾದ್ದಿಲ್ಲ ತಾನೆ?" “ಮತ್ಯಾಕೆ ತಡ? ಶಾಸ್ತ್ರಿಗಳೇ, ಎಲ್ಲಿ ಶಾಸ್ತ್ರಿಗಳು? ಗಂಟೆ ಒಂಭತ್ತು ದಾಟಿತ್ತು. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಕೆಲಸ. ದಿನವೆಲ್ಲಾ ಅಲ್ಲೇ ನಿಂತು ಶೋಕ ಪ್ರದರ್ಶಿನ ಮಾಡುತ್ತ ಇರುವುದಕ್ಕುಂಟೆ? ಅತ್ತವರು ಅಳು ನಿಲ್ಲಿಸಬೇಕು. ಸತ್ತವರನ್ನು ಕಳುಹಿಸಿಕೊಡಬೇಕು. ಕೃಷ್ಣಪ್ಪನವರೇ. ಇದೇನಿದು? ನೀವೂ ಸರಿ. ಏಳಿ!" ....ಅವರು ಎದ್ದಬಳಿಕ ಮುಂದಿನ ಸಿದ್ಧತೆ ತಡವಾಗಲಿಲ್ಲ. ಮೂರು-ನಾಲ್ಕು ಜನ ಆ ಏರ್ಪಾಟಿಗೋಸ್ಕರವೇ ಓಡಾಡಿದರು. ಸ್ವಲ್ಪ ಹೊತ್ತಿನಲ್ಲೆ ಶವ ಸುಡುಗಾಡಿಗೆ ಹೋಯಿತು. ....ಮನೆ ಬರಿದಾದಾಗ ಒಂದೇ ಸಮನೆ ರೋಧಿಸತೊಡಗಿದ ವಿಜಯಳ ಬಳಿ ನಾಲ್ಕು ಜನ ಹೆಂಗಸರು ನಿಂತಿದ್ದರು. ತಾಯಿಯನ್ನು ಕಳೆದುಕೊಂಡ ಆ ಎಳೆಯ ಮಕ್ಕಳನ್ನು ಅವರು ಸಮಾಧಾನ ಪಡಿಸಿದರು.