ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ೧೨೯

ಹುಡುಕಿಕೊಂಡು ಆಕೆ ಮನೆಗೆ ಬರುತಿದ್ದುದರಿಂದ ತನಗೆ ಪರಿಚಿತಳು. ಮನೆಯ ಬೇಸರ ತುಂಬಿದ ಆಗಿನ ವಾತಾವರಣದಲ್ಲಿ ಅಂತಹ ಪರಿಚಿತೆಯ ಆಗಮನ ಸ್ವಾಗತಾರ್ಹವೇ ಆಗಿತ್ತು. ಬಂದವಳನ್ನೂ ಸುನಂದೆಯನ್ನೂ ನಡುಮನೆಯಲ್ಲಿ ಬಿಟ್ಟು, ಕಾಫಿ ಮಾಡಲು ಒಳಕ್ಕೆ ತೆರಳಿದಳು. ಯಾರು ಬಂದರೆಂದು ಕೊಠಡಿಯ ಬಾಗಿಲ ಮರೆಯಿಂದ ಇಣಕಿ ನೋಡಿದ ಸರಸ್ವತಿಯನ್ನು ಸುನಂದಾ ಕರೆದಳು. "ಬಾರೇ. ನಿಮ್ಮತ್ತೆ ಬಂದಿದಾಳೆ. ಅಷ್ಟರಲ್ಲೇ ಮರೆತ್ಬಿಟ್ಟಿಯಾ?" ಒಂದು ನಿಮಿಷದ ಅಳುಕು. ಬಳಿಕ ಗೆಳೆತನ. ಚಂಪಾ ಹೇಳಿದಳು: "ಮೊನ್ನೆಯೇ ಬರಬೇಕೂಂತಿದ್ದೆ ಸುನಂದಾ. ತಿಂಗಳ ಸಂಕಟ. ಹೊರಡೋಕಾಗಲಿಲ್ಲ....ನಾನು ಹಿಂದೆ ಬರ್‍ತಿದ್ದಾಗಲೆಲ್ಲ ನಿಮ್ಮಮ್ಮ ನನಗೆ ಎಷ್ಟೊಂದು ಸಲ ತಿಂಡಿ ಕೊಟ್ಟಿದ್ರು, ಗೊತ್ತೆ?" ತಡವಾದರೇನಂತೆ? ಸಹಾನುಭೂತಿಯ ಕಂಬನಿ ಮಿಡಿಯಲು ಈಗಲೂ ಚಂಪಾ ಸಿದ್ಧವಾಗಿಯೇ ಇದ್ದಳು. ಆದರೆ ಸುನಂದೆಯ ಮಾತು ಆಕೆಯನ್ನು ಆಶ್ಚರ್ಯಪಡಿಸಿತು. "ಇರಲಿ ಬಿಡು, ಚಂಪಾ. ಸದ್ಯಃ ನೀನೂ ಅಳಬೇಡ. ನನಗಂತೂ ಕಣ್ಣೀರು ಸುರಿಸಿ ಸಾಕಾಗಿದೆ" ಹಾಗೆ ಆಶ್ಚರ್ಯವೆನಿಸಿದುದು ಕ್ಷಣ ಕಾಲ ಮಾತ್ರ. ಅದರ ಬದಲು, ಸುನಂದೆಯ ಮಾತಿನ ಹಿಂದಿನ ನೋವು ಆಕೆಗೆ ಮನವರಿಕೆಯಾಯಿತು: ಮರುಕ ಹುಟ್ಟಿತು. ಚಂಪಾ ಮೌನ ಕಳೆದುದನ್ನು ಕಂಡು, ತಾನು ಒರಟಾಗಿ ಆಡಿದೆನೇನೋ ಎಂದು ಸಂಶಯಪಟ್ಟು, ಸುನಂದಾ ಬೇಗನೆ ಬೇರೆ ಮಾತು ತೆಗೆದಳು. "ಕಾಲೇಜಿಗೆ ಸೇರ್ಕೊಂಡಿಯಾ?" "ಹೂಂ ಕಣೇ." "ಅಂತೂ ಮನೇಲಿ ಒಪ್ಪಿದ್ರು, ಅಲ್ವೆ?" "ಒಪ್ಪಿಸೋದು ಬಹಳ ಕಷ್ಟವಾಯ್ತು ಅಂತೂ ಸೇರ್ಕೊಂಡೆ,"