ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಳು ಸುತ್ತಿನ ಕೋಟೆ ಜೋಡಿ ಬೆಟ್ಟವನೇರಿ ಕಣಿವೆಯಾಳದಿ ಸುಳಿದು ಬಯಲುದ್ದ ಹರಿದು ಭೂಮಧ್ಯರೇಖೆಯೆಡಬಲಕಿರುವ ಕಗ್ಗಾಡನುಳಿದು ಕಡಲ ಮಡಿಲೊಳು ಇರವ ಮರೆವ ಬಯಕೆ! ನಾನೊಂದು ಮುದಿಗೊಡ್ಡು. ಇದ್ದರೂ ಇರಬಹುದು ಅರುಳುಮರುಳು! ಮಗುವಾಗಿ ಬಂದವನು ಜೊತೆಯಾಗಿ ನಿಂತವನು ಬಂದ ದಾರಿಯ ತುಳಿದು ಯುಗವಾಯಿತಲ್ಲವೆ? ನೆರಳು ನೆರಳಾಗಿರುಳು. ಎದೆಯು ಕನವರಿಸುತಿದೆ ಬೇವು ಬೆಲ್ಲದ ನೆನಹು. ನೆನಹಂತೆ ಕಣ್ಣಿದಿರು ಮಲೆಯ ಸಾಲು; ವಿವರಗಳ ಬೈತಿಟ್ಟರೂ ಮಾಟ ಸುಸ್ಪಷ್ಟ. 'ತಾತ, ಬೇಸರ ನನಗೆ, ಒಳ್ಳೆ ಕತೆ ಹೇಳು.' “ಮಗು, ಕೇಳು: ಏಳು ಸುತ್ತಿನ ಕೋಟೆ. ಸರ್ಪಕಾವಲು ಅದಕೆ ಹೊರಗೆ ಒಳಗೆ!”