ಈ ಪುಟವನ್ನು ಪ್ರಕಟಿಸಲಾಗಿದೆ

೯೪

ನಡುವಿನ ಪರದೆ

ಓಸಾಕಾನಿಗೆ ಇದರ ಸುಳಿವೇ ತಿಳಿಯದು. ನಾಳೆ ಕೋರ್ಟಿನಲ್ಲಿ ಇದನ್ನೆಲ್ಲ ಅವನೆದುರು ಓದಿ ತಿಳಿಸಿ ಬಿಡುತ್ತೇನೆ ನೋಡುವಾ, ಏನಾಗುದದೋ!" ಎಂದು ಮತ್ತೊಂದು ಫಾಯಿಲಿಗೆ ಕೈ ಹಾಕಿದರು:


ಎರಡನೆಯ ದಿನ ಸಾಯಂಕಾಲ ಮೇಜರ್ ರಾಮನ್ ನಾಯರು ವಿಚಾರಣೆಯನ್ನು ಮುಗಿಸಿ, ತನ್ನ ಕೋಣೆಗೆ ಬಂದರು. ಇಂದು ನಿನ್ನೆಗಿಂತಲೂ ಅವರು ಹೆಚ್ಚು ಅಸ್ವಸ್ಥರಾಗಿದ್ದರು. ಮತ್ತೆ ಸಿಗರೇಟನ್ನು ಹಚ್ಚಿಕೊಂಡು ಆರಾಮ ಖುರ್ಚಿಯಲ್ಲಿ ಪವಡಿಸಿ ವಿಚಾರಿಸತೊಡಗಿದರು.

"ಟ್ರಿಬ್ಯೂನಿನಲ್ಲಿ ಶ್ರೀಮತಿ ಓಸಾಕಾಳ ಕರಾಳ ಕೃತ್ಯವನ್ನು ಮೇಜರ್ ಓಸಾಕಾನ ಎದುರಿನಲ್ಲಿ ಓದಿ ಹೇಳಿದರೂ ಅವನೆಷ್ಟು ಸ್ತಬ್ಬನಾಗಿದ್ದನಲ್ಲ? 'ನಿನ್ನ ಹೆಂಡತಿ ೪-೬ ಜನರ ಜತೆಯಲ್ಲಿ ಸಂಬಂಧವಿಟ್ಟಿದ್ದಳು!' ಎಂದು ತಿಳಿಸಿದರೂ, ಅವನು ಶಾಂತಚಿತ್ತನಾಗಿರಬೇಕೆ?-- ಆಯಿತು, ನಾಳೆಗೆ ಅವನು ಗಲ್ಲಿಗೆ ಹೋಗುತ್ತಾನಲ್ಲ... ಅದಕ್ಕೆ ಅವನು ಅಷ್ಟೊಂದು ಉದಾಸೀನವೃತ್ತಿಯನ್ನು ತಳೆದಿರಬೇಕು!” ತಮ್ಮಷ್ಟಕ್ಕೆ ತಾವೇ ರಾಮನ್‌ರು ಸಮಾಧಾನ ಪಡಿಸಿಕೊಂಡರು.



ಮರುದಿನ ಮೂಡಿತು, ಕೋಲಾಲಂಪೂರದ ಸೆಂಟ್ರಲ್ ಜೈಲಿನಲ್ಲಿ ಮೇಜರ್ ಓಸಾಕಾನನ್ನು ಗಲ್ಲಿಗೇರಿಸುವ ದಿನವದು. ಎಲ್ಲ ಅಧಿಕಾರಿಗಳೂ ಅಲ್ಲಿ ಹಾಜರ್ ಇದ್ದರು. ರಾಮನ್‌‌ರೂ ಅಲ್ಲಿ ಉಪಸ್ಥಿತರಿದ್ದರು. ನಡೆದ ಸಂಸ್ಕಾರಗಳಿಗೆಲ್ಲ ಹಾಜರ್ ಇರುವುದು ಅವರ ಕರ್ತವ್ಯವೇ ಆಗಿತ್ತು. ಮುಂಜಾನೆ ೮-೩೦ ಕ್ಕೆ ಗಲ್ಲು ಎಂದರೆ ೮ ಘಂಟಿಗೆ ಮೇಜರ್ ಓಸಾಕಾನನ್ನು ಗಲ್ಲಿನ ಸ್ಥಳಕ್ಕೆ ತರಲಾಯಿತು. ಪದ್ಧತಿಯ ಪ್ರಕಾರ ರಾಮನ್ ನಾಯರರು ಮೇಜರ್ ಓಸಾಕಾನನ್ನು ಕೇಳಿದರು:

"ನಿಮ್ಮ ಕೊನೆಯ ಇಚ್ಛೆಯನ್ನು ಹೇಳಬಯಸುವಿರಾ?"