ಈ ಪುಟವನ್ನು ಪ್ರಕಟಿಸಲಾಗಿದೆ

೧೧೨

ಕಾಲ ಮಹಿಮೆ

ತೊಡಗಿದವು. ಆದರೆ ಹೊಟ್ಟೆ ಬಟ್ಟೆಗಳನ್ನು ಪುಕ್ಕಟೆ ನೋಡಿಕೊಂಡು ಮೇಲೆ ಮತ್ತೆ ರೂಪಾಯಿಗಳನ್ನು ಕೊಡುವ ಮಹಾಯುದ್ಧ ಇಂಥ ಮಧ್ಯಮ ವರ್ಗದವರಿಗೊಂದು ಮಹಾದ್ವಾರವನ್ನೇ ತೆರೆಯಿಸಿತು. ೧೯೩೯ನೇ ಇಸ್ವಿ ಕೆಲವರಿಗೆ ಕಷ್ಟ ತಂದೊಡ್ಡಿದರೂ ಇನ್ನು ಕೆಲವರಿಗೆ ಸಂತೋಷಗೊಳಿಸಿತು. ಇದು ಮಹಾಯುದ್ಧದ ಮೋಡಗಳ ಮರೆಯಲ್ಲಿ ಅವಿತ ಸುಂದರ ಸೌದಾಮಿನಿ.

ಕಾರಕೂನಿಕೆಯಲ್ಲಿ ಬೇಸತ್ತು ಹೋದ ಮಾಧವರಾಯರು, ತಮ್ಮ ಮಗ ವಸಂತನನ್ನು ನಿರ್ಭಯರಾಗಿ ಸೈನ್ಯಖಾತೆಗೆ ಕಳಿಸಿಬಿಟ್ಟರು. ಕೇಶವರಾಯರಿಗೂ ಮಗಳಿರುವ ಬದಲು ಮಗನೇ ಇದ್ದಿದ್ದರೆ, ಅವರೂ ಮಾಧವರಾಯರ ಮಾರ್ಗವನ್ನೇ ಅವಲಂಬಿಸುತ್ತಿದ್ದರು. ಆದರೆ ದುರ್ದೈವಕ್ಕೆ ಅವರು ಹೆಣ್ಣಿನ ತಂದೆಯಾಗಿದ್ದರು. ಆದೂ ಹಿಂದುಸ್ಥಾನದಲ್ಲಿ, ಮೇಲಾಗಿ ಕರ್ನಾಟಕದಲ್ಲಿ.

ವಸಂತ ಸೈನ್ಯ ಖಾತೆಯನ್ನು ಸೇರಿದಂದಿನಿಂದ, ಮಾಧವರಾಯರಿಗೆ ಶುಕ್ರದೆಸೆ ಪ್ರಾರಂಭವಾಯಿತು. ಮನೆಯಲ್ಲಿ ಊಟ ಉಪಚಾರದ ಖರ್ಚು ತಮ್ಮೊಬ್ಬರದೇ. ಆದರೆ ಬರುವ ಸಂಬಳ ಇಮ್ಮಡಿಯಾಯಿತು. ವಸಂತನಿಂದ ಪ್ರತಿತಿಂಗಳು ತಪ್ಪದೇ ದುಡ್ಡು ಬರುತ್ತಿತ್ತು. ಮುಂದೆ ಅವನು ಇಟಲಿ ರಣರಂಗಕ್ಕೆ ಹೋದಮೇಲೆಯೂ ಮೊದಲಿನಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಫ್ಯಾಮಿಲಿ ಅಲಾಟಮೆಂಟ ಬರತೊಡಗಿತು. ಇದೆಲ್ಲದರ ಪರಿಣಾಮದಿಂದ ಮಾಧವರಾಯರ ಇರುವಿನಲ್ಲಿ ಕೊಂಚ ಮಾರ್ಪಾಟಾಗತೊಡಗಿತು. ಅವರು ಊರೊಳಗಿನ ಬಾಡಿಗೆ ಮನೆ ಬಿಟ್ಟು ಮಾಳಮರಡಿಯಲ್ಲಿ ಮನೆಯನ್ನು ಬಾಡಿಗೆಗೆ ತೆಗೆದುಕೊಂಡರು. ಮುಂದೆ ವಸಂತ ಇಟಲಿಯಲ್ಲಿ ತುಂಬ ಶೌರ್ಯದಿಂದ ಕಾದುದರ ಪರಿಣಾಮವಾಗಿ ಅವನಿಗೆ M. B. E. ಪದವಿ ದೊರಕಿತು.

ಈ ಪದವಿಯ ಬಲದಿಂದ ಮಾಧವರಾಯರು ಮಾಳಮರಡಿಯಲ್ಲಿ ಒ೦ದು ಬಂಗಲೆಯನ್ನೇ ಮಾರಲಿಕ್ಕೆ ತೆಗೆದುಕೊಂಡು ಇರತೊಡಗಿದರು. ಇದೆಲ್ಲ ಮಾರ್ಪಾಡು ಕೇಶವರಾಯರು ತಮ್ಮ ಕಣ್ಣುಗಳಿಂದಲೇ ನೋಡಿದ್ದರು. ಅದರ ವಿರುದ್ಧ ರೀತಿಯಲ್ಲಿ ತಮ್ಮ ಅವನತಿಯಾಗುತ್ತಿರುವದನ್ನು ಅವರು ಗಮನಿಸಿದ್ದರು. ಬೆಲೆಗಳು ಏರಿದರೂ ತಮ್ಮ ಸಂಬಳ ಬೆಳೆಯುವ ಲಕ್ಷಣಗಳೇ ಅವರಿಗೆ ತೋರುತ್ತಿರಲಿಲ್ಲ. ತನ್ನ ಮತ್ತು ಮಗಳ ಹೊಟ್ಟೆ