ಈ ಪುಟವನ್ನು ಪ್ರಕಟಿಸಲಾಗಿದೆ

೧೧೫

ಕಾಲ ಮಹಿಮೆ


ಮಾಧವರಾಯರ ಈ ಮಾತು ಕೇಳಿಯಂತೂ ಕೇಶವರಾಯರು ಅಲ್ಲಿಯೆ ಪ್ರಾಣ ಬಿಡುವ ಸ್ಥಿತಿಗೆ ಬಂದರು. ಆದರೇನು, ಅವರು ಅಷ್ಟು ಪುಣ್ಯವಂತರಲ್ಲವೇನೋ, ಜೀವಂತರಾಗಿಯೇ ಉಳಿದಿದ್ದರು. ನಿರಾಶೆಯ ಧ್ವನಿಯಲ್ಲಿಯೆ ಕೇಶವರಾಯರು ಬಿನ್ನವಿಸಿಕೊಂಡರು:

"ಮಾಧೂ, ನೀ ಹಿಂಗ ಮಾತಾಡೀ ಅಂತ ಕಲ್ಪನಾ ಇರಲಿಲ್ಲವಾ ನನಗ. ಹಿಂದ, ನಾವಿಬ್ಬರೂ ಠರಾಯಿಸಿಕೊಂಡದ್ದು ಮರತಿ ಏನು? ಅದನ್ನು ಮರೆತರೂ ವಸಂತ, ಶೀಲಾ ಇಬ್ಬರೂ ಒಬ್ಬರಮ್ಯಾಲೊಬ್ಬರು ಎಷ್ಟು ಪ್ರೇಮದಿಂದ ಇದ್ದಾರೆ ಅನ್ನೋದು ನಿನಗೆ ಗೊತ್ತದ. ಅವರ ಪವಿತ್ರ ಪ್ರೇಮದ ಸಲುವಾಗಿಯಾದರೂ ನೀವು ಈ ಲಗ್ನಕ್ಕೆ ಒಪ್ಪಬೇಕು."

ಅವರ ಮಾತಿನತ್ತ ಲಕ್ಷಗೊಡದೆ "ಪ್ರೇಮ ಗೀಮ ನನಗೆ ಗೊತ್ತಿಲ್ಲ. ಅದನ್ನ ಅವಗs ಕೇಳಿಕೋ" ಎಂದು ಮಾಧವರಾಯರು ಒಳ ನಡೆದುಬಿಟ್ಟರು. ಅವರ ಬೆನ್ನ ಹಿಂದೆಯೇ ಬಂದು ನಿಂತಿದ್ದ ವಸಂತ, ಅಪ್ಪನ ಮಾತು ಮುಗಿದಾಕ್ಷಣ, ಖಡಾಖಂಡಿತವಾಗಿ ಹೇಳಿಬಿಟ್ಟ:

"ಸಣ್ಣ ಹುಡುಗರು ಆಟಾ ಆಡೂ ಮುಂದ ಲಗ್ನ ಮಾಡತಿರ್‍ತಾರ ಅಂತ ಹೇಳಿ, ಅದು ಖರೇ ಅಂತ ತಿಳಿಯೋದೇನು ಮಾಮಾ." ನನಗ ಈಗ ಐದು ಸಾವಿರ ರೂಪಾಯಿ ವರದಕ್ಷಿಣೆ ಕೊಡಲಿಕ್ಕೆ ತಯಾರಾಗೇದ ಮಂದಿ. ಅದ ಏನು ನಿನ್ನ ತಾಕತ್ತು. ನಾ ಈಗ ಕ್ಯಾಪ್ಟನ್ ವಸಂತ ಆಗೇನಿ. ನನ್ನ ಅಂತಸ್ತಿಗೆ ಸರಿಯಾಗಿ ಆಗಬೇಕಲ್ಲ."

"ಮನುಷ್ಯತ್ವದ ಮುಂದ ಅಂತಸ್ತು ಗಿಂತನ್ನು ಸುಳ್ಳಪಾ. ನನಗ ಅಂತಸ್ತು ಅಂದರೆ ಏನಂಬುದೇ ಗೊತ್ತಿಲ್ಲಪ್ಪಾ."

"ಅದು ಗೊತ್ತಿದ್ದರೆ ನೀ ಇಲ್ಲೀ ತನಕಾ ಬರಿದ್ದಿಲ್ಲ."

ಆ ಉತ್ತರದಿಂದ ಕೇಶವರಾಯರು ಸಂತ್ರಪ್ತರಾಗಿ ಎದ್ದು ಬಿಟ್ಟರು. ಆದರೆ ತಮ್ಮ ಸಿಟ್ಟನ್ನು ಯಾರ ಮೇಲೆ ತೋರಿಸುವದು? ವರಾನ್ವೇಷಣೆಗೆ ಬಂದ ತಂದೆ ಎಷ್ಟು ನಮ್ರನಾಗಿದ್ದರೂ ಕಡಿಮೆಯೇ.