ಈ ಪುಟವನ್ನು ಪ್ರಕಟಿಸಲಾಗಿದೆ

೧೧೮

ಕಾಲ ಮಹಿಮೆ

ಶೀಲೆಯನ್ನು ಎಳೆದುಕೊಂಡು ತಂದು ಅವನ ಕೋಣೆಯಲ್ಲಿ ಬಿಟ್ಟು ಬಾಗಿಲನ್ನು ಎಳೆದುಕೊಂಡು ನಡೆದರು. ಶೀಲೆ ತನ್ನಷ್ಟಕ್ಕೆ ತಾನೇ ಅಭಿನಂದಿಸಿಕೊಂಡಳು. ಕೊನೆಗಾದರೂ ದೈವ ತನಗೆ ಬೆಂಬಲ ನೀಡಿತೆಂದು ಅವಳಿಗೆ ಸಂತೋಷವಾಗಿತ್ತು. ಅವಳಿಗೆ ಆನಂದ ಅಪರಿಮಿತವಾಗಿತ್ತು. ಆ ಆನಂದಭರದಲ್ಲಿ ವಸಂತನ ಬಳಿ ಬಂದು, ಅವನ ಕಾಲಡಿಯಲ್ಲಿಯೇ ಕುಳಿತು, ಅವನ ಬೂಟುಗಳನ್ನು ಬಿಚ್ಚತೊಡಗಿದಳು. ವಸಂತ ನಿಶ್ಚಿಂತನಾಗಿ ಸಿಗರೇಟನ್ನು ಎಳೆಯತೊಡಗಿದ್ದ.

ಬೂಟ್ಸುಗಳನ್ನು ಕಳಚುತ್ತಿದ್ದಂತೆ ಶೀಲೆ ಒಮ್ಮೆಲೆ ಹೌಹಾರಿದಳು.

ವಸಂತ ಕರ್ಕಶ ನಗು ನಗುತ್ತ "ಏಕೆ ಅಂಜುತ್ತಿ. ಅದು ಜೋಡಿಸಿದ ಕಾಲು, ಕಟ್ಟಿಗೆಯ ಕಾಲು. ಅದರಿಂದೇನೂ ಅಪಾಯವಿಲ್ಲ. ಮಹಾಯುದ್ಧದಲ್ಲಿ ಕಾಲನ್ನು ಕಳೆದುಕೊಂಡೆ. ಅದರ ಬದಲು ಈ ಕಾಲನ್ನು ಕೂಡಿಸಬೇಕಾಯಿತು. ಕಾಲ ಮಹಿಮೆ!"

"ಕಾಲ ಮಹಿಮೆ" ಶೀಲೆ ಅಳುತ್ತ ಮುಖವನ್ನು ಮುಚ್ಚಿಕೊಂಡಳು.